ಹಾಸನ : ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ದರ ನಿಗದಿ ಪಡಿಸಿರುವುದನ್ನು ಕೂಡಲೇ ರದ್ದುಗೊಳಿಸಿ, ಕಡ್ಡಾಯವಾಗಿ ಉಚಿತ ಚಿಕಿತ್ಸೆಗೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಡಿವೈಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಆಡಳಿತ ಸರ್ಕಾರದ ನಿರ್ಲಕ್ಷದಿಂದಾಗಿ ಅಗತ್ಯವಾಗಿ ಬೇಕಾಗಿರುವ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ, ಔಷಧಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಇದರಿಂದಾಗಿ ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಲಭಿಸದೇ ಖಾಸಗಿ ಆಸ್ಪತ್ರೆಗಳ ಧನದಾಹಿಕೋರತನಕ್ಕೆ ಬಲಿಯಾಗುತ್ತಿರುವ ಈ ಸ್ಥಿತಿಯಲ್ಲಿ ಕೊರೊನಾ ಸೋಂಕು ಸಾಮಾನ್ಯ ಜನರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಸಾಮಾನ್ಯ ರೋಗಿಗಳು ಈಗ ಆಸ್ಪತ್ರೆಗಳಿಗೆ ಹೋಗಲಾರದ ಸ್ಥಿತಿ ಬಂದೊದಗಿದೆ ಎಂದರು.
ರಾಜ್ಯ ಸರ್ಕಾರ ಇಂತಹ ಗಂಭೀರ ಸ್ಥಿತಿಯಲ್ಲಿ ಕೋವಿಡ್ ಸೋಂಕಿತ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಸಾರ್ವಜನಿಕ ಆಸ್ಪತ್ರೆಗಳನ್ನು ಎಲ್ಲಾ ರೀತಿಯಲ್ಲಿಯೂ ಸಜ್ಜುಗೊಳಿಸಬೇಕು. ಅಗತ್ಯವಿದ್ದರೆ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆದು, ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಬೇಕು. ಆದರೆ ಸರ್ಕಾರದ ಕಾರ್ಯಪಡೆಯು ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರ ನಿಗದಿಗೊಳಿಸಿದೆ ಇದು ಖಂಡನೀಯ ಎಂದರು.
ಸರ್ಕಾರ ಮುಂದೆ ನಿಂತು ಖಾಸಗಿಯವರಿಗೆ ಸುಲಿಗೆಗೆ ಅವಕಾಶ ಮಾಡಿಕೊಡುವ ರೀತಿಯ ಈ ನಡೆ ನ್ಯಾಯಯುತವಾದುದಲ್ಲ. ಆದ್ದರಿಂದ ರಾಜ್ಯ ಸರ್ಕಾರದ ಈ ಶಿಫಾರಸನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಜನವಿರೋಧಿ ಶಿಫಾರಸನ್ನು ವಾಪಸ್ ಪಡೆಯದೇ ಇದ್ದರೆ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.