ಹಾಸನ: ಬೇಲೂರು ಪಟ್ಟಣದ ಸಮೀಪ ಯಗಚಿ ನದಿ ಹರಿಯುತ್ತಿದ್ದು, ಈ ನದಿಗೆ ಮಣ್ಣು ಸುರಿದು ರಾತ್ರೋರಾತ್ರಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಲಾಗ್ತಿದೆ.
ಆದರೆ, ರಸ್ತೆಯನ್ನ ಮಣ್ಣಿನಿಂದ ನಿರ್ಮಿಸಿರೋದ್ರಿಂದ ಜನ-ಜಾನುವಾರು ಇದರ ಮೇಲೆ ಬರುವಾಗ ಯಗಚಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ಈ ರಸ್ತೆ ಕೊಚ್ಚಿಕೊಂಡು ಹೋಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಯಗಚಿ ನದಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರಸ್ತೆಯಿಂದ ಮರಳು ದಂಧೆಕೋರರಿಗೆ ಹೆಚ್ಚು ಅನುಕೂಲವಾಗುತ್ತದೆ.
ಇನ್ನು, ಈ ರಸ್ತೆ ನಿರ್ಮಾಣಕ್ಕೆ ಯಾವ ಇಲಾಖೆಯ ಅನುಮತಿ ಪಡೆಯಲಾಗಿದೆ? ಅಕ್ರಮವಾಗಿ ಯಗಚಿ ನದಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದ ನೇತೃತ್ವ ವಹಿಸಿರುವರಾದ್ರೂ ಯಾರು? ಎಂಬುದು ಪ್ರಶ್ನೆಯಾಗೇ ಉಳಿದಿದ್ದು, ರಾತ್ರೋರಾತ್ರಿ ಕೆಲಸ ಮಾತ್ರ ಪ್ರಾರಂಭವಾಗಿದೆ.
ನೂರಾರು ಲೋಡ್ ಮಣ್ಣು ಸುರಿದು ರಾಜಾರೋಷವಾಗಿ ಬೃಹತ್ ಜೆಸಿಬಿಗಳ ಮೂಲಕ ನದಿಯನ್ನು ಹಾಳು ಮಾಡುತ್ತಿದ್ದರೂ ಕೂಡ ಸಂಬಂಧಪಟ್ಟ ಇಲಾಖೆ ಸೇರಿದಂತೆ ತಾಲೂಕು ಆಡಳಿತಾಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಅಕ್ರಮ ರಸ್ತೆ ಕಾಮಗಾರಿಗೆ ಕಡಿವಾಣ ಹಾಕಿ ಯಗಚಿ ನದಿಯನ್ನು ಉಳಿಸಬೇಕಿದೆ.