ಹಾಸನ : ಕೋವಿಡ್ ಇರುವುದರಿಂದ ಈ ಬಾರಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 5 ರಿಂದ 17ರವರೆಗೆ ತೆರೆಯಲಿದೆ. ಕೊರೊನಾ ಹಿನ್ನೆಲೆ ಪ್ರಾಥಮಿಕ ಸಭೆ ನಡೆಸಿ ದರ್ಶನದ ಬಗ್ಗೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಚರ್ಚಿಸಲಾಗಿದೆ. ಹಾಸನದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆ ಜನ ಸೇರುವುದನ್ನು ನಿಷೇಧಿಸಿರುವುದರಿಂದ ಜನಜಂಗುಳಿ ಆಗದಂತೆ ಆಚರಿಸುವುದು ಕಷ್ಟಸಾಧ್ಯ. ವಿಧಿವಿಧಾನಗಳ ಪ್ರಕಾರ ಈ ಬಾರಿ ಮೊದಲ ಹಾಗೂ ಕೊನೆಯ ದಿನ ಮಾತ್ರ ಸರಳ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಇನ್ನುಳಿದ ದಿನಗಳಲ್ಲಿ ನಡೆಯಬೇಕಾದ ಪೂಜಾ ವಿಧಿ ವಿಧಾನಗಳ ಪ್ರಕಾರ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.
ಹಾಸನಾಂಬೆ ಉತ್ಸವ ಈ ಬಾರಿ ಕೇವಲ ಸಾಂಪ್ರದಾಯಿಕ ಆಚರಣೆಗೆ ಮೀಸಲಾಗಲಿದೆ. ಪ್ರತಿವರ್ಷ ದೇವಿ ದರ್ಶನ ಪಡೆಯಲು ಐದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದರು. ಆದರೆ, ಈ ಬಾರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಸಭೆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಭಕ್ತರಿಗೆ ಹಾಸನಾಂಬೆ ನೇರ ದರ್ಶನಕ್ಕೆ ಅವಕಾಶ ನೀಡದೇ ಆನ್ಲೈನ್ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತಯಾರಿ ಚಿಂತನೆ ನಡೆಸಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಮೂಲಕ ಲೈವ್ ಟೆಲಿಕಾಸ್ಟ್ ಮೂಲಕ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ಮಾಡಲು ಯೋಚಿಸಲಾಗುತ್ತಿದೆ ಎಂದು ಹೇಳಿದರು.