ಸಕಲೇಶಪುರ (ಹಾಸನ): ಪಾನಮತ್ತ ವ್ಯಕ್ತಿಯೊಬ್ಬ ಗ್ರಾಮ ಪಂಚಾಯಿತಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ನಾಶಪಡಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆ ನಡೆದಿದೆ. ಹರಗರಹಳ್ಳಿಯ ಹರೀಶ್ ಎಂಬ ವ್ಯಕ್ತಿ ಮದ್ಯಪಾನ ಮಾಡಿ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದ. ಬಳಿಕ ವಿನಾಕಾರಣ ಪಂಚಾಯಿತಿ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿದ್ದ ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದಾನೆ.
ಘಟನೆಯ ವಿವರ: ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗರಹಳ್ಳಿ ಗ್ರಾಮದ ನಿವಾಸಿ ಹರೀಶ್ ಎಂಬಾತ ಪಂಚಾಯಿತಿಗೆ ಪದೇಪದೇ ಭೇಟಿ ನೀಡುತ್ತಾ ಅಲ್ಲಿರುವ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದು, ಗುರುವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಕ್ಕದ ಜಾನೇಕೆರೆ ಗ್ರಾಮದಲ್ಲಿ ಸ್ಮಶಾನ ಭೂಮಿಯ ಸರ್ವೆ ಕಾರ್ಯಕ್ಕೆ ತೆರಳಿದ್ದರು. ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಮತ್ತು ಕಂಪ್ಯೂಟರ್ ಆಪರೇಟರ್ ಮಾತ್ರ ಇದ್ದರು. ಈ ವೇಳೆ ಭೇಟಿ ನೀಡಿದ ಹರೀಶ್ ನನಗೆ ಹೆಲ್ತ್ ಕಾರ್ಡ್ ಮಾಡಿಕೊಡಬೇಕು ಎಂದು ಸಿಬ್ಬಂದಿಗೆ ತಾಕೀತು ಮಾಡಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹೊರಗೆ ಹೋಗಿದ್ದಾರೆ ಅವರು ಬಂದ ನಂತರ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಸುಮ್ಮನಾಗದ ಹರೀಶ್ ಪಂಚಾಯಿತಿ ಪಿಡಿಓ ಹಾಗೂ ಕಾರ್ಯದರ್ಶಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಕಚೇರಿಯಲ್ಲಿದ್ದ ಕಂಪ್ಯೂಟರ್ಗಳನ್ನು ಮೇಲಕ್ಕೆತ್ತಿ ಎಸೆಯುವ ಪ್ರಯತ್ನ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಅಲ್ಲೇ ಇದ್ದ ಇಬ್ಬರು ಸಿಬ್ಬಂದಿ ಆತನನ್ನು ಸಮಾಧಾನಪಡಿಸಿ, ಕುರ್ಚಿಯ ಮೇಲೆ ಕೂತುಕೊಳ್ಳಲು ಹೇಳಿದ್ದಾರೆ. ನಂತರ ಬಂದ ಅಧಿಕಾರಿಗಳು ಮಾಸ್ಕ್ ಧರಿಸದೆ ಕುರ್ಚಿಯ ಮೇಲೆ ಕುಳಿತಿದ್ದಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಹರೀಶ್ ಮಾಸ್ಕ್ ಗ್ರಾ.ಪಂ ಅಧಿಕಾರಿಗಳೇ ಕೊಡಬೇಕು ಎಂದು ಕ್ಯಾತೆ ತೆಗೆದಿದ್ದಾನೆ.
ಸಂಪೂರ್ಣ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.