ಹಾಸನ: ಹಾಡಹಗಲೇ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಹಾಸನ ಹೊರವಲಯದ ಹಾಲುವಾಗಿಲು ಬಳಿ ನಡೆದಿದೆ.
ಕುಮಾರ್ (43) ಮೃತ ದುರ್ದೈವಿ. ಈತ ಗಣೇಶ ಹಬ್ಬದ ಕಾರಣ ತನ್ನ ಬೈಕ್ ತೊಳೆಯಲು ಸಮೀಪದ ನಿಂಗೇಗೌಡನಕೊಪ್ಪಲು ಬಳಿಯ ಕೆರೆಗೆ ಬಂದಿದ್ದಾನೆ. ಈ ವೇಳೆ ಆರೋಪಿ ಗೋವಿಂದೇಗೌಡ (40) ಎಂಬುವವನು ಕುಡಿದು ಬಾಯಿಗೆ ಬಂದ ಹಾಗೆ ಬೈದುಕೊಂಡು ರಸ್ತೆಬದಿಯಲ್ಲಿ ತೂರಾಡುತ್ತಿದ್ದನಂತೆ.
ಹಬ್ಬದ ದಿನದಂದು ಮದ್ಯ ಸೇವನೆ ಮಾಡಿದ್ದೀಯಾ.. ಏನಾಗಿದೆ ನಿನಗೆ? ಎಂದು ಕುಮಾರ್ ಬುದ್ಧಿವಾದ ಹೇಳಿ ತನ್ನ ಪಾಡಿಗೆ ತಾನು ಬೈಕ್ ತೊಳೆಯುತ್ತಿದ್ದ. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಗೋವಿಂದೇಗೌಡ ಅವನ ಮಾತನ್ನು ಸಹಿಸದೆ ಹಿಂದಿನಿಂದ ಬಂದು ತಲೆಗೆ ಮತ್ತು ಮುಖಕ್ಕೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಕುಣಿಗಲ್ ಮೂಲದ ಆರೋಪಿ ಗೋವಿಂದೇಗೌಡ ಮದ್ಯಪಾನ ವ್ಯಸನಿಯಾಗಿದ್ದ ಎನ್ನಲಾಗಿದೆ. ಹಾಸನದ ನೀರಾವರಿ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿ ಮತ್ತು ಹಳ್ಳಿಗಳಿಗೆ ನೀರು ಬಿಡುವ ನೀರುಗಂಟಿಯ ಕೆಲಸ ಮಾಡಿಕೊಂಡು ತನ್ನ ಹೆಂಡತಿ ಮನೆಯಲ್ಲಿ ವಾಸವಾಗಿದ್ದ. ರಜಾದಿನದಲ್ಲಿ ಕುರಿಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ತನ್ನ ಬಳಿ ಕುಡುಗೋಲು ಅಥವಾ ಮಚ್ಚು ಹಿಡಿದುಕೊಂಡು ತಿರುಗುತ್ತಿದ್ದ ಎಂಬ ಮಾಹಿತಿ ದೊರೆತಿದೆ.
ಕೊಲೆ ಮಾಡಿದ ನಂತರ ಮೃತದೇಹದ ಪಕ್ಕದಲ್ಲೇ ಕುಳಿತಿದ್ದ ಗೋವಿಂದೇಗೌಡನನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.