ಹಾಸನ/ಬೇಲೂರು: ಕಾರು ಚಾಲನೆ ಮಾಡುವ ವೇಳೆ ಮೊಬೈಲ್ ಬಳಸಿದ್ದರ ಪರಿಣಾಮ ಕಾರು ಪಲ್ಟಿಯಾಗಿ ಕೆರೆಗೆ ಬಿದ್ದ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ.
ರಿಸೀವ್ ಮಾಡಲು ಹೋದವೇಳೆ ಕ್ಷಣಾರ್ಧದಲ್ಲಿ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವೆನೆಂದು ತಿಳಿದಿ ರಸ್ತೆ ಬದಿಗೆ ತಿರುಗಿಸಿದ ಹಿನ್ನಲೆಯಲ್ಲಿ ಕಾರು ಪಲ್ಟಿಯಾಗಿ ಕೆರೆಗೆ ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ನಡೆದಿದೆ.
ಕಾರು ಚಾಲನೆ ಮಾಡುತ್ತಿದ್ದ ಬೇಲೂರು ತಾಲೂಕಿನ ಹಗರೆ ಗ್ರಾಮದ ರಮೇಶ್ ಎಂಬುವವರು ಘಟನೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಡುಗೆ ಕೆಲಸ ಮಾಡಿಕೊಂಡಿರುವ ಇವರು ಎಂದಿನಂತೆ ಮನೆಯಿಂದ ಕೆಲಸಕ್ಕೆ ತಮ್ಮ ಓಮ್ನಿ ಕಾರಲ್ಲಿ ಹೋಗುತ್ತಿದ್ದರು. ಈ ವೇಳೆ ತಮ್ಮ ಮೊಬೈಲ್ಗೆ ಬಂದ ಕಾಲ್ ರಿಸೀವ್ ಮಾಡುವ ಭರದಲ್ಲಿ ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುತ್ತೆನೆಂದು ತಿಳಿದು ಏಕಾಏಕಿ ತಮ್ಮ ಕಾರಲ್ಲಿ ರಸ್ತೆ ಬದಿಗೆ ತಿರುಗಿಸಿದ ಹಿನ್ನೆಲೆ ಪಲ್ಟಿಯಾಗಿ ಪಕ್ಕದ ಕೆರೆಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಇನ್ನು ಕಾರು ಪಲ್ಟಿಯಾಗುವ ಲಕ್ಷಣ ಕಂಡು ಬಂದಾಗ ಚಾಲನೆ ಮಾಡುತ್ತಿದ್ದ ರಮೇಶ್ ತಕ್ಷಣ ಕಾರಿನಿಂದ ಹೊರಕ್ಕೆ ಜಂಪ್ ಮಾಡಿದ್ದಾರೆ. ಇನ್ನು ಚಾಲಕನ ನಿಯಂತ್ರಣ ತಪ್ಪಿದ ಕಾರು ಸ್ವಲ್ಪ ದೂರು ಸಾಗಿ ರಸ್ತೆಯ ಸಮೀಪದಲ್ಲಿಯೇ ಇದ್ದ ಹಗರೆ ಗ್ರಾಮದ ಕೆರೆಗೆ ಬಿದ್ದಿದೆ. ಕಾರು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಕೆರೆಯಿಂದ ಕಾರನ್ನು ಮೇಲಕ್ಕೆತ್ತಲಾಗಿದೆ.
ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಅಪಾಯ ಎಂದು ಪೊಲೀಸರು ಸಾರಿ ಸಾರಿ ಹೇಳಿದ್ರೂ ಚಾಲಕರು ಕೇಳುವುದಿಲ್ಲ. ಇಂತಹ ಘಟನೆಗಳಿಂದಾದ್ರೂ ಜನ ಎಚ್ಚೆತ್ತು ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು.