ಹಾಸನ: ಜಿಲ್ಲೆಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟಿವ್ ಕಳೆದ ಒಂದು ವಾರದಿಂದ ಬಾರಿ ಇಳಿಕೆ ಕಂಡು ಬಂದಿದ್ದು,ಗುರುವಾರದಂದು 96 ಪ್ರಕರಣ ದಾಖಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ 5 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಇಂದು ಬಿಡುಗಡೆಯಾದ ಪ್ರಕರಣದಲ್ಲಿ 96 ಜನರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 21.250 ಮಂದಿ ಗುಣಮುಖರಾಗಿದ್ದಾರೆ. 2141 ಸಕ್ರೀಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 41 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಸೋಂಕಿತರ ಸಂಖ್ಯೆ 23.800 ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 409ಕ್ಕೆ ತಲುಪಿದೆ ಎಂದರು.
ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-7, ಅರಕಲಗೂಡು-15, ಅರಸೀಕೆರೆ-೦, ಬೇಲೂರು-7, ಚನ್ನರಾಯಪಟ್ಟಣ-4, ಹಾಸನ-54, ಹೊಳೆನರಸೀಪುರ 6, ಸಕಲೇಶಪುರ-2 ಹಾಗೂ ಇತರೆ 1 ಸೇರಿ ಒಟ್ಟು 96 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಕೊರೊನಾ ದಿನೇ ದಿನೆ ಉಲ್ಬಣವಾಗುತ್ತಿರುವ ಹಿನ್ನೆಲೆ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಕಂಡುಬಂದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.