ಹಾಸನ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ವರ್ಗದ ಕುಂದುಕೊರತೆ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳಾದಾಗ ಪೊಲೀಸ್ ಕಾನ್‌ಸ್ಟೆಬಲ್‌ಗಳು ಆರೋಪಿಗಳ ಪರ ನಿಲ್ಲುತ್ತಾರೆ. ಪೊಲೀಸ್ ಠಾಣೆಗಳಲ್ಲಿ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಸಾಮಾನ್ಯ ಗೌರವವನ್ನು ಕೊಡುವುದಿಲ್ಲ. ಪರಿಶಿಷ್ಟ ಸಮುದಾಯದವರು ವಾಸಿಸುವ ಕೇರಿಗಳ ಸಮೀಪವೇ ಹೆಚ್ಚು ಮದ್ಯದಂಗಡಿಗಳಿವೆ. ಗ್ರಾಮಿಣ ಭಾಗದ ಪೆಟ್ಟಿಗೆ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದವು.
ಮಾದಿಗ ದಂಡೋರ ವಿಜಯಕುಮಾರ್ ಮಾತನಾಡಿ, ಹೊಳೆನರಸೀಪುರ ಜಗಜೀವನ್ ರಾಮ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪೋಸ್ಟರ್ ಹರಿದು ಹಾಕಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಆಗಿಲ್ಲ ಎಂದು ದೂರಿದರು.
ಜಿ.ಆರ್.ಹೇಮರಾಜ್ ಮಾತನಾಡಿ, ಹೇಮಾವತಿ ಮುಳುಗಡೆ ನಿರಾಶ್ರಿತರಿಗೆ ಹಳೆಕೋಟೆ ಹೋಬಳಿ ಕುರುಬರಹಳ್ಳಿಯಲ್ಲಿ 4 ಎಕರೆ ಜಮೀನು ಮಂಜುರಾಗಿದೆ. ಆದರೆ, ಅದೇ ಗ್ರಾಮದ ಸವರ್ಣಿಯರು ಅತಿಕ್ರಮ ಪ್ರವೇಶಮಾಡಿ ತೊಂದರೆ ನೀಡುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ದ.ಸಂ.ಸ ರಾಜ್ಯ ಸಂಚಾಲಕ ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರ ಮೇಲೆ 106 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 7 ಜನರನ್ನು ಹತ್ಯೆ ಮಾಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದರೆ ಪೊಲೀಸ್ ಆಡಳಿತ ಕುಸಿದಿದೆ ಎಂದರ್ಥ ಎಂದು ಆರೋಪಿಸಿದರು. ದೌರ್ಜನ್ಯ ನಡೆದ ಸಂದರ್ಭದಲ್ಲಿ ದೂರು ನೀಡಲು ಠಾಣೆಗೆ ಹೋದರೆ ಪೊಲೀಸ್ ಸಿಬ್ಬಂದಿ ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಆರೋಪಿಗಳಿಂದ ಪ್ರತಿದೂರು ಸ್ವೀಕರಿಸಲಾಗುತ್ತಿದೆ. ಇದರಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಯಾವ ಪೊಲೀಸ್ ಠಾಣೆಯಲ್ಲಿ 5 ವರ್ಷ ಅವಧಿಗಿಂತ ಹೆಚ್ಚು ಸಮಯ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಚನ್ನರಾಯಪಟ್ಟಣದ ಪ್ರಕಾಶ್ ಮಾತನಾಡಿ, ಚನ್ನರಾಯಪಟ್ಟಣಕ್ಕೆ ಬೆಂಗಳೂರಿನಿಂದ ಸಾಕಷ್ಟು ಯುವಕರು ಹಿಂತಿರುಗಿದ್ದು, ಗುಂಡಾಗಿರಿ ಹೆಚ್ಚಾಗಿದೆ. ಇದರಿಂದ ನಾಗರೀಕರು ಮುಕ್ತವಾಗಿ ಓಡಾಡಲು ಆಗುತ್ತಿಲ್ಲ. ಆದ್ದರಿಂದ ರೌಡಿಸಂ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಆಲೂರಿನ ರಂಗಯ್ಯ ಮಾತನಾಡಿ, ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮರಳು ದಂಧೆ ನಡೆಯುತ್ತಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಮುಖಂಡರನ್ನು ಪೊಲೀಸ್ ಠಾಣೆಯ ಒಳಗೆ ಬಿಡುವುದಿಲ್ಲ. ಆದ್ದರಿಂದ ಆಲೂರು ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಮನವಿ ಮಾಡಿದರು.
ಅರಕಲಗೂಡು ತಾಲ್ಲೂಕಿನ ರಮೇಶ್ ಮಾತನಾಡಿ, ಕಬಡ್ಡಿ ವೆಂಕಟೇಶ್ ಹತ್ಯೆ ಸಂಬಂಧಿಸಂತೆ ಆರಂಭದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅಲ್ಲಿನ ಸಬ್ ಇನ್‌ಸ್ಪೆಕ್ಟರ್ ಅನುಚಿತವಾಗಿ ವತರ್ತಿಸಿದಲ್ಲದೆ, ದೂರು ಸ್ವೀಕರಿಸದೆ ನಿರಾಕರಿಸಿದರು. ಕುಡಿದು ಹೊಡೆದಾಡಿಕೊಂಡಿದ್ದಾರೆ, ಸಂದನ ಮಾಡಿಕೊಳ್ಳಿ ಎಂದು ಬಲವಂತ ಮಾಡಿದರು. ಆದ್ದರಿಂದ ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.