ಹಾಸನ: ನಗರದ ಕೋವಿಡ್-19 ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು ಹಾಗೂ ಕೊರೊನಾ ವಾರಿಯರ್ಸ್ ಮತ್ತು ಸಹ ನೌಕರರಿಗೆ ಸಕಲೇಶಪುರ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯವರಿಂದ ಹಾನ್ ಬಾಳ್ ಚಿಕ್ಕಿ ಹಾಗೂ ಸ್ಪಿರುಲಿನ್ ಚಿಕ್ಕಿಗಳನ್ನು ವಿತರಿಸಲಾಯಿತು.
ವೈರಸ್ ವಿರುದ್ಧ ಹೋರಾಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಿಕ್ಕಿಗಳು ಸಹಕಾರಿ ಎಂಬ ಆಧಾರದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಕೊರೊನಾ ಸೋಂಕಿತರಿಗೆ ನೀಡಲು, ಚಿಕ್ಕಿಗಳನ್ನು ಹಸ್ತಾಂತರ ಮಾಡಲಾಯಿತು.
ಕಾಲಕ್ಕನುಗುಣವಾಗಿ ಹರಡುವ ವೈರಸ್ ಜ್ವರ ಮತ್ತು ಹೊಸ ಸೋಂಕುಗಳ ಪರಿಸ್ಥಿತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಆರೋಗ್ಯವನ್ನು ಸಂರಕ್ಷಿಸುವುದು ಬಹಳ ಅಗತ್ಯವಾಗಿದೆ ಎಂದು ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯ ಸಿಇಒ ರವಿ ತೇಜ ಹೇಳಿದರು.
ಕಡಲೆ ಕಾಯಿ, ಸ್ಪಿರುಲಿನಾ, ಬೆಲ್ಲ, ಕಾಳುಮೆಣಸು ಮತ್ತು ಏಲಕ್ಕಿ ಬಳಸಿ ತಯಾರಿಸಲಾಗಿದೆ. ಇದು ನೈಸರ್ಗಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆರೋಗ್ಯಕರ ಜೀವನಕ್ಕೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಕಡಲೆ ಚಿಕ್ಕಿ, ಕಡಲೆ ಮಿಠಾಯಿ ಉತ್ಪಾದನೆಗಾಗಿ ಸಿ.ಎಫ್.ಟಿ.ಆರ್.ಐ ಮೈಸೂರಿನ ತಂತ್ರಜ್ಞಾನ ಮತ್ತು ಪರವಾನಗಿ ಹೊಂದಿರುವ ಜಿಲ್ಲೆಯ ಸಕಲೇಶಪುರದ ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ, ಸ್ಪಿರುಲಿನ್ ಕರಿಮೆಣಸು ಚಿಕ್ಕಿ ಮತ್ತು ಸ್ಪಿರುಲಿನ್ ಏಲಕ್ಕಿ ಚಿಕ್ಕಿ ಎಂಬ ಎರಡು ರೀತಿಯ ಚಿಕ್ಕಿಯನ್ನು ಗ್ರಾಹಕರ ಉಪಯೋಗಕ್ಕಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ.ವೇಣುಗೋಪಾಲ್, ಡಾ.ಕೃಷ್ಣಮೂರ್ತಿ, ಡಾ.ಮುತ್ತುರಾಜ್ ಹಾಗೂ ಇತರರು ಹಾಜರಿದ್ದರು.