ಹಾಸನ: ಮಮತಾ ಬ್ಯಾನರ್ಜಿ ಅವರಿಗೆ ಈ ರೀತಿ ಆಗಬಾರದಿತ್ತು. ಎಡಗಾಲು ಮುರಿದಿದೆ ಎಂದು ತಿಳಿದಿದ್ದೇನೆ. ಎದುರಾಳಿಗಳು ಈ ಮಟ್ಟಕ್ಕೆ ಹೋಗಬಾರದಿತ್ತು. ಚುನಾವಣಾ ಆಯೋಗ ಅಲ್ಲಿನ ಪೊಲಿಸ್ ಅಧಿಕಾರಿಗಳನ್ನು ಬದಲಾಯಿಸಿದೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಇಂತಹ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ಹೋಗಬಾರದು ಎಂದು ಮಾಜಿ ಪ್ರಧಾನಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಹುಟ್ಟೂರು ಹರದನಹಳ್ಳಿ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬೆಂಗಳೂರಿನಿಂದ ಹಾಸನಕ್ಕೆ ಪತ್ನಿ ಚೆನ್ನಮ್ಮರೊಂದಿಗೆ ಆಗಮಿಸಿದ ದೇವೇಗೌಡರು, ದೇವಾಲಯಕ್ಕೆ ತೆರಳುವ ಮುನ್ನ ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ನಾನು ನಂದಿಗ್ರಾಮದಲ್ಲೇ ಸ್ಪರ್ಧಿಸುತ್ತೇನೆ ಎಂದು ಮಮತಾ ಪಣ ತೊಟ್ಟಿದ್ದಾರೆ. ಅವರ ಎದುರಾಳಿಗಳು ನಡೆದುಕೊಂಡ ರೀತಿ ಖಂಡನೀಯ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸಾಮಾನ್ಯ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಅವರು, ಹಾಸನ ಜಿಲ್ಲೆಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದೆ. ನನ್ನ ಆರೋಗ್ಯ ಪರಿಸ್ಥಿತಿ ಚನ್ನಾಗಿಲ್ಲ. ಈ ಪರಿಸ್ಥಿತಿ ಬಗ್ಗೆ ನಾನು ಯೋಚಿಸಿರಲಿಲ್ಲ. ಆರೋಗ್ಯ ಸರಿ ಹೋದ ನಂತರ ನಾನು ಪ್ರವಾಸ ಕೈಗೊಳ್ಳುತ್ತೇನೆ ಎಂದ್ರು.
ಪ್ರತಿ ವರ್ಷ ಮನೆ ದೇವರಾದ ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದರ್ಶನಕ್ಕೆ ಬರ್ತಿದ್ದೆ. ಕಳೆದ ಬಾರಿ ಕೊರೊನಾ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ. ಈಗಾಗಲೇ ಕುಮಾರಸ್ವಾಮಿ ದೇವಾಲಯಕ್ಕೆ ಬಂದು ಹೋಗಿದ್ದಾರೆಂದು ತಿಳಿಯಿತು. ನನಗೆ ವೈದ್ಯರು ಪ್ರಯಾಣ ಮಾಡದಂತೆ ಹೇಳುತ್ತಾರೆ. ಆದ್ರೆ ನಾನು ದೈವ ಭಕ್ತ. ಕಳೆದ 15 ದಿನದಿಂದ ತುಂಬಾ ಕಠಿಣ ದಿನಗಳಾಗಿವೆ. ಮುಂದಿನ ವರ್ಷ ನನ್ನ ಆರೋಗ್ಯ ಸ್ಥಿತಿ ಹೇಗಿರುತ್ತದೋ ಗೊತ್ತಿಲ್ಲ ಎಂದು ಹೇಳಿದರು.
ಮಧು ಬಂಗಾರಪ್ಪ ಪಕ್ಷ ಬಿಡೋ ವಿಚಾರ ತಿಳಿದಿದ್ದೇನೆ. ಯಾರ್ಯಾರು ಹೇಗೆ ನಡೆದುಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಪಕ್ಷ ಬಿಡೋ ವಿಚಾರ ಮಾತನಾಡುವುದಿಲ್ಲ. ಈ ಬಗ್ಗೆ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದ ಅವರು, ಸಿದ್ದರಾಮಯ್ಯನವರು ನಾಳೆ ಚುನಾವಣೆ ಬಂದ್ರು ಕೂಡ ನಾವೇ ಗೆಲ್ಲುತ್ತೇವೆ ಎಂಬ ವಿಚಾರಕ್ಕೆ ಗೆಲ್ಲಲಿ ಸಂತೋಷ. ನಾನ್ಯಾಕೆ ಅವರ ಹೇಳಿಕೆಗೆ ಮಾತನಾಡಲಿ. ಹಿಂದೆ ಅವರು ಎಷ್ಟು ಮತ ಪಡೆದಿದ್ರು ಎಂದು ಗೊತ್ತಿದೆ. ಅವರು ಹೇಳಿದಕ್ಕೆ ನಾಳೆನೇ ಚುನಾವಣೆ ಆಗಲ್ಲ. ಸಿಂಧಗಿಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಕರೆದ್ದೊಯ್ದಿದ್ದಾರೆ. ಈಗ ಯಾವುದೇ ಚುನಾವಣೆ ಇಲ್ಲ. ಆದ್ದರಿಂದ ಅನವಶ್ಯಕ ಚರ್ಚೆ ಬೇಡ ಎಂದು ಹೇಳಿದರು.