ಹಾಸನ: ಕಳೆದ ವರ್ಷ ಪ್ರವಾಹ, ಈ ವರ್ಷ ಕೊರೊನಾ ಹೀಗೆ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯದ ರೈತರು ಕೃಷಿ ಚಟುವಟಿಕೆಗಳಿಗೆ ಆಯಾ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿದ್ದು, ಅದನ್ನ ಕೂಡಲೇ ಮನ್ನಾ ಮಾಡುವ ಮೂಲಕ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ರೇವಣ್ಣ ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 13,300 ಕೋಟಿ ಸಾಲವನ್ನು ರೈತರು ಪಡೆದಿದ್ದು, ಹಾಸನ ಜಿಲ್ಲೆ ಒಂದರಲ್ಲೇ 2 ಲಕ್ಷದ 58 ಸಾವಿರ 192 ಕೋಟಿ ರೂಪಾಯಿ ಬೆಳೆ ಸಾಲ ನೀಡಲಾಗಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಗೆ ಮತ್ತು ಸ್ರೀ ಶಕ್ತಿ ಸಂಘಗಳಿಗೆ ನೀಡಲಾಗಿರುವ 68 ಕೋಟಿ ರೂಪಾಯಿ ಸಾಲವನ್ನು ಕೂಡ ಮನ್ನಾ ಮಾಡುವ ಮೂಲಕ ಕೆಳ ವರ್ಗದ ಜನರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಜಿಲ್ಲೆಯ ಒಟ್ಟು ರೈತರ ಸುಮಾರು 660.77 ಕೋಟಿ ಸಾಲವನ್ನು ಮನ್ನಾ ಮಾಡಬೇಕು. ಇದರ ಜೊತೆಗೆ 25 ಲಕ್ಷದ 300 ಕುಟುಂಬಗಳಿಗೆ ಅಲ್ಪಾವಧಿ ಸಾಲ ನೀಡುವುದಾಗಿ ಹೇಳಿದ್ದಾರೆ. ಅದನ್ನು ಕೂಡ ಈ ಬಾರಿ ಸರ್ಕಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.