ಹಾಸನ : ಕುವೆಂಪು ನಗರ ಉದ್ಯಾನದಲ್ಲಿ ಭಾನುವಾರ ಕೊಕ್ಕರೆಗಳು ಸಾವಿಗೀಡಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟು ಹಾಕಿದೆ.
ಕೊರೊನಾ ಭೀತಿಯಿಂದ ಮನೆಯಿಂದ ಹೊರ ಬಾರದ ಜನರಲ್ಲಿ ಪಕ್ಷಿಗಳ ಸಾವು ಹಕ್ಕಿಜ್ವರದ ಭಯ ಸೃಷ್ಟಿಸಿದೆ. ಮರದಲ್ಲಿ ಕುಳಿತಿದ್ದ ಕೊಕ್ಕರೆಗಳು ಕೆಳಗೆ ಬಿದ್ದಿದ್ದನ್ನು ಗಮನಿಸಿದ ಸಾರ್ವಜನಿಕರು ನಗರಸಭೆ ಹಾಗೂ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಮೃತ ಐದು ಕೊಕ್ಕರೆಗಳನ್ನು ವಶಕ್ಕೆ ಪಡೆದಿರುವ ಪಶುಪಾಲನಾ ಇಲಾಖೆ ಅಧಿಕಾರಿಗಳು ನಗರದ ಪಶು ವೈದ್ಯಕೀಯ ಕಾಲೇಜಿನಲ್ಲಿ ಇರಿಸಿದ್ದಾರೆ.
ಬೆಂಗಳೂರಿನ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಸೆಂಟರ್‌ಗೆ ಮೃತ ಕೊಕ್ಕರೆಗಳನ್ನು ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಿದ್ದು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲಿಯೂ ನಿಖರ ಫಲಿತಾಂಶ ದೊರೆಯದಿದ್ದರೆ ಭೂಪಾಲ್‌ನ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ತಿಳಿಸಿದ್ದಾರೆ.
ಇನ್ನು ಪಕ್ಷಿಗಳ ಸಾವಿಗೆ ನಿಖರ ಕಾರಣ ಹೇಳಲು ಆಗುವುದಿಲ್ಲ. ಆಹಾರ ಹಾಗೂ ಹವಾಮಾನದಲ್ಲಿನ ಬದಲಾವಣೆಯಿಂದ ಅನಾಹುತ ಸಂಭವಿಸುತ್ತದೆ. ನಗರಸಭೆ ಪಾರ್ಕ್ ಸುತ್ತ ಕಟ್ಟೆಚ್ಚರ ವಹಿಸಿದ್ದು, ಮುಂದೆಯೂ ಪಕ್ಷಿಗಳ ಸಾವು ಮುಂದುವರಿದರೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.