ಹಾಸನ: ಕಳೆದ 3 ದಿನಗಳಿಂದ ಕೋವಿಡ್ ಪರೀಕ್ಷೆಯ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಗುರಿ ಪೂರ್ಣಗೊಳಿಸುವುದರ ಜೊತೆಗೆ ಹೋಂ ಐಸೋಲೇಷನ್‍ನಲ್ಲಿ ಇರುವವರು ಸೇರಿದಂತೆ ಎಲ್ಲ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಅವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲ ತಾಲೂಕು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರ ಬಳಿ ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದಿದ್ದಾರೆ.
ತಾಲೂಕುಗಳಿಗೆ ಈಗಾಗಲೇ 20 ಮಂದಿ ಸ್ವಾಬ್ ಕಲೆಕ್ಟರ್ಗಳನ್ನು ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದ್ದು, ಅವರ ಮೂಲಕ ಹೆಚ್ಚು ಸ್ವಾಬ್ ಟೆಸ್ಟ್ ಮಾಡಿಸಿ ಗುರಿ ಸಾಧಿಸಿ. ಪ್ರತಿ ತಾಲೂಕಿಗೂ ಅಗತ್ಯವಿರುವ ಸ್ವಾಬ್ ಕಲೆಕ್ಟರ್ಗಳನ್ನು ಅರ್ಜಿ ಮೂಲಕ ಆಹ್ವಾನಿಸಿ. ವಿಜ್ಞಾನ ಪದವೀಧರರು ಹಾಗೂ ಸ್ಟಾಫ್ ನರ್ಸ್‍ಗಳನ್ನು ನೇಮಕ ಮಾಡಿಕೊಳ್ಳಿ ಎಂದು ಸೂಚಿಸಿದರು.
ಜಿ.ಪಂ ಸಿಇಒ ಬಿ.ಎ ಪರಮೇಶ್ ಮಾತನಾಡಿ ಗ್ರಾಮ ಪಂಚಾಯಿತಿಗೆ ಬರುವ ಜನರನ್ನು ಕೋವಿಡ್ ಪರೀಕ್ಷೆ ಮಾಡಿಸಲು ಪ್ರೇರೇಪಿಸುವ ಕಾರ್ಯ ಮಾಡಬೇಕು ಎಂದು ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹಲವಾರು ಸ್ತ್ರೀಶಕ್ತಿ ಹಾಗೂ ಸ್ವ-ಸಹಾಯ ಸಂಘಗಳಿದ್ದು, ಅವುಗಳ ಸಂಯೋಜಕರಿಗೆ ನಿರ್ದಿಷ್ಟ ಗುರಿ ನೀಡಿ ಸಂಘದ ಸದಸ್ಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.