ಹಾಸನ: ರಾಜ್ಯದಲ್ಲಿ ಅಧಿಕಾರ ದುರುಪಯೋಗ ಆಗುತ್ತಿದೆ. ಆದರೂ ನಮ್ಮ ಹೋರಾಟವನ್ನು ನಾವು ಮಾಡಲೇಬೇಕು. ತಡವಾದರೂ ಮುಂದಿನ ದಿನಗಳಲ್ಲಿ ಜನರು ನಮ್ಮನ್ನ ಗೌರವಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಅಧಿದೇವತೆ ಹಾಸನಾಂಬ ದೇವಾಲಯಕ್ಕೆ ಪತ್ನಿ ಸಮೇತ ಆಗಮಿಸಿ ದರ್ಶನ ಪಡೆದ ಅವರು, ಇದೊಂದು ಪುಣ್ಯಕ್ಷೇತ್ರ. ನಂಬಿಕೆ ಪದಕ್ಕೆ ಪವಿತ್ರ ಧರ್ಮಕ್ಷೇತ್ರಗಳು ಸಾಕ್ಷಿಯಾಗಿವೆ. ರಾಜ್ಯದ ಎಲ್ಲ ಜನತೆಯ ದುಃಖವನ್ನು ದೂರ ಮಾಡಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆ ನಡೆಯಬೇಕು ಎಂದು ನಮ್ಮ ಪಕ್ಷದವರು ನ್ಯಾಯಾಲಯಕ್ಕೆ ಹೋಗಿದ್ದೆವು. ಈಗಾಗಲೇ ನಮ್ಮ ಪಕ್ಷ ಕೂಡ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಾವು ಕೂಡ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದೇವೆ. ಅಧಿಕಾರ ಸಿಗುವುದು ತಡವಾದರೂ ಜನರು ನಮ್ಮ ಮೇಲೆ ಗೌರವ ನೀಡುತ್ತಾರೆ. ಆ ನಂಬಿಕೆ ನಮಗಿದೆ ಎಂದ ಡಿಕೆಶಿ, ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿ ಎಲ್ಲರ ಬಾಳು ಬೆಳಗಲಿ ಎಂದು ಹಾರೈಸಿದರು.