ಹಾಸನ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅಧಿಕಾರ ದುರುಪಯೋಗದ ಪರಮಾವಧಿ ಮುಟ್ಟಿದವರು. ಆ ಕಾರಣಕ್ಕೆ ಇಂದು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಟಾಂಗ್ ಕೊಟ್ಟಿದ್ದಾರೆ.
ಇಂದು ದೇವಿ ದರ್ಶನಕ್ಕೆ ಕಡೆಯ ದಿನವಾದ್ದರಿಂದ ಪತ್ನಿಯೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಆಶಿರ್ವಾದ ಪಡೆದ ಅವರು, ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಜನಸ್ನೇಹಿ ಆಡಳಿತ ನೀಡೋದು ಬಿಜೆಪಿ ಮಾತ್ರ. ಕಾಂಗ್ರೆಸ್ ಅವರಿಗಲ್ಲದೆ ಇನ್ಯಾರಿಗೂ ಅಧಿಕಾರ ದುರುಪಯೋಗದ ವಿಷಯದಲ್ಲಿ ನಂಬರ್ ಒನ್ ಸರ್ಟಿಫಿಕೇಟ್ ಸಿಗಲ್ಲ. ಎ ಯಿಂದ ಝಡ್ ವರೆಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಕೀರ್ತಿ, ಅಪಕೀರ್ತಿ ಇದ್ದರೆ ಅದು ಕಾಂಗ್ರಸ್‌ಗೆ ಮಾತ್ರ. ಇದನ್ನು ಅರ್ಥ ಮಾಡಿಕೊಂಡು ಡಿ. ಕೆ. ಶಿವಕುಮಾರ್ ಮಾತನಾಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಜನರು ನಮ್ಮನ್ನ ಗೌರವಿಸುತ್ತಾರೆ: ಡಿಕೆಶಿ
ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ ಟಿ ರವಿ, ಮುಖ್ಯಮಂತ್ರಿಗಳು ಪಕ್ಷಕ್ಕೆ ಬರುವ ಸಂದರ್ಭದಲ್ಲಿ ವಾಗ್ದಾನ ನೀಡಿದವರಿಗೆಲ್ಲ ಅದನ್ನ ಈಡೇರಿಸಿದ್ದಾರೆ. ಮುನಿರತ್ನ ಅವರಿಗೆ ಏನು ವಾಗ್ದಾನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಕೊಟ್ಟಿರುವುದನ್ನು ಈಡೇರಿಸುತ್ತಾರೆ ಎಂದರು.
ಹಾಸನಕ್ಕೂ ಸಚಿವ ಸ್ಥಾನ ಸಿಗಲಿ, ಚಿಕ್ಕಮಗಳೂರಿಗೂ ಸಚಿವ ಸ್ಥಾನ ಒಲಿದು ಬರಲಿ ಎಂದು ಆಶಿಸುತ್ತೇನೆ. ಸಚಿವ ಸಂಪುಟ ಪುನರ್ರಚನೆ ವಿಷಯದಲ್ಲಿ ಅಸಮಾಧಾನ ಎಂಬುದು ಮನಸ್ಥಿತಿಯನ್ನು ಆಧರಿಸಿರುತ್ತೆ. ಅದನ್ನು ಸಮಾಧಾನ ಮಾಡಲು ಬರುತ್ತೆ. ಸಮಾಧಾನ ಮಾಡ್ತೇವೆ ಎಂದು ಹೇಳಿದರು.

ನಾಳೆಯಿಂದ ಕಾಲೇಜುಗಳು ಪುನಾರಂಭ ಆಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಎಚ್ಚರದಿಂದ ಇದ್ದು, ವಿದ್ಯೆ ಪಡೆಯಬೇಕು. ಕಾಲೇಜು ಆರಂಭ ಒಳ್ಳೆಯ ವಿಷಯ. ಇದು ವಿದ್ಯಾರ್ಥಿಗಳು, ಮಕ್ಕಳ ಭವಿಷ್ಯದ ಪ್ರಶ್ನೆ ಎಂದರು. ಈಗ ಕೊರೊನಾ ಕಡಿಮೆಯಾಗುತ್ತಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳನ್ನ ಹಂತ ಹಂತವಾಗಿ ತರೆಯುವುದು ಸೂಕ್ತ ಎಂಬುದು ನಮ್ಮ ಅನಿಸಿಕೆ. ಕಾಲೇಜಿಗೆ ಕಳುಹಿಸಿದ ನಂತರ ಯಾರ ಮೇಲೂ ದೂರಬಾರದು ಎಂದು ಪೋಷಕರಿಂದ ಪತ್ರ ಪಡೆಯುತ್ತಿದ್ದೇವೆ ಎಂದು ತಿಳಿಸಿದರು. ಮಕ್ಕಳನ್ನು ಶಾಲೆ, ಕಾಲೇಜಿಗೆ ಕಳಿಸುವುದು ಪೋಷಕರ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿರುವುದರಿಂದ ಒಪ್ಪಿಗೆ ಪತ್ರ ಕೇಳುತ್ತಿದ್ದೇವೆ. ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ವಿಷಯದಲ್ಲಿ ಜವಬ್ದಾರಿ ಮರೆಯಲ್ಲ. ಕಾಲೇಜಿನ ವಿದ್ಯಾರ್ಥಿಗಳು ತಿಳುವಳಿಕೆ ಉಳ್ಳವರಾಗಿದ್ದಾರೆ. ಹಾಗಾಗಿ, ನಾಳೆ ದೂರಬಾರದು ಎಂದಷ್ಟೇ ಪೋಷಕರ ಪತ್ರ ಪಡೆಯುತ್ತಿದ್ದೇವೆ ಎಂದರು.