ಹಾಸನ: ಸಚಿವ ಸಿ.ಟಿ.ರವಿ, ಶಾಸಕ ಪುಟ್ಟೇಗೌಡ, ಸಚಿವ ಹಾಗೂ ಹಾಲಿ ಶಾಸಕ ರಾಮ್‌ದಾಸ್ ಅವರು ಹಾಸನಾಂಬೆ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪುಟ್ಟೇಗೌಡ, ರಾಜ್ಯದಲ್ಲಿ ಮತದಾರರ ತೀರ್ಪಿನಿಂದ ಸಮ್ಮಿಶ್ರ ಸರ್ಕಾರ ಬರಬೇಕಾಯಿತು. ಜೆಡಿಎಸ್ ಬಾವುಟವನ್ನು ಡಿ.ಕೆ.ಶಿವಕುಮಾರ್ ಹಿಡಿದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ. ಎರಡು ಪಕ್ಷಗಳು ಜೊತೆಯಲ್ಲಿ ಸಮ್ಮಿಶ್ರ ಸರ್ಕಾರ ಮಾಡಿದ್ದರಿಂದ ವಿಶ್ವಾಸದಲ್ಲಿ ಬಾವುಟ ಹಿಡಿದಿರುವುದು ಅಷ್ಟೇ ಎಂದು ಹೇಳಿದರು.
ಸಚಿವ ಸಿ.ಟಿ.ರವಿ ಸಹ ಕುಟುಂಬ ಸಮೇತರಾಗಿ ಬಂದು ದೇವರಿಗೆ ಅರ್ಚನೆ ಮಾಡಿಸಿದರು. ದೇವಾಲಯದ ಆವರಣದಲ್ಲಿ ಇರುವ ಗಣೇಶ, ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಕೂಡ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷ ಕೂಡ ಹಾಸನಾಂಬೆ ದರ್ಶನ ಪಡೆದಿದ್ದೇನೆ. ತಾಯಿಯ ಕೃಪೆಯಿಂದ ಈ ವರ್ಷ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗಿದೆ ಎಂದರು.
ಉಪ ಚುನಾವಣೆ ಫಲಿತಾಂಶ ಸರ್ಕಾರದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದರ ಬಗ್ಗೆ ನನಗೆ ವಿಶ್ವಾಸವಿದೆ. ಜನರಿಗೆ ಸ್ಥಿರ ಸರ್ಕಾರ ಬೇಕಾಗಿದೆ. ಕಿಚಡಿ ಸರ್ಕಾರವನ್ನು 14 ತಿಂಗಳು ರಾಜ್ಯದ ಜನ ನೋಡಿದ್ದಾರೆ. ಸ್ಥಿರ ಸರ್ಕಾರ ಬೇಕು ಎಂದು ಬಿಜೆಪಿಯನ್ನು ಜನರು ಗೆಲ್ಲಿಸುತ್ತಾರೆ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿರುವುದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು ಎಂಬುದನ್ನು ನಾವು ಸ್ಮರಿಸುತ್ತೇವೆ. ಆದರೆ ನಮ್ಮ ಉದ್ದೇಶ ರಾಜ್ಯಕ್ಕಾಗಿ ಕೆಲಸ ಮಾಡುವುದು ಹಾಗೂ ರಾಜ್ಯದ ಹಿತ ಕಾಪಾಡುವುದು ಎಂದರು.
ವಿಜಯಶಂಕರ್ ಬಿಜೆಪಿ ಪಕ್ಷದಲ್ಲಿಯೇ ಶಾಸಕ, ಸಂಸದ, ಎಂಎಲ್‌ಸಿಯಾಗಿದ್ದರೂ. ನಮ್ಮ ಪಕ್ಷದಿಂದ ಅವರಿಗೆ ಅವಕಾಶಗಳನ್ನು ಕಲ್ಪಿಸಲಾಗಿತ್ತು. ಅವರು ಪಕ್ಷ ಬಿಟ್ಟು ಹೋಗಿ ಏನನ್ನೂ ಸಾಧಿಸಿಲ್ಲ. ಅವರು ಮತ್ತೆ ಪಕ್ಷಕ್ಕೆ ಬರುತ್ತೇನೆ ಎಂದರೆ ರಾಜ್ಯ ಹಾಗೂ ಸ್ಥಳೀಯ ಬಿಜೆಪಿ ಪಕ್ಷ ನಿರ್ಣಯ ಮಾಡುತ್ತದೆ ಎಂದರು.
ಮಾಜಿ ಸಚಿವ ಹಾಗೂ ಶಾಸಕ ರಾಮದಾಸ್ ದೇವಾಲಯದ ಹೊರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವಿ ದರ್ಶನ ಮಾಡಿ ನಮ್ಮ ಮನಸ್ಸಿಗೆ ಆನಂದವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಬಂದು ದೇವಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಜೀವನದಲ್ಲಿ ಎಂದೂ ತಾಯಿಯ ಮುಂದೆ ಹೋದಾಗ ವೈಯಕ್ತಿಕವಾದ ಬೇಡಿಕೆಯನ್ನು ಇಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು.