ಹಾಸನ : ಎತ್ತಿನಹೊಳೆ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಅಂತಾ ಮಾಜಿ ಸಚಿವ ಹೆಚ್ ಡಿ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಎತ್ತಿನಹೊಳೆ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ನಕಲಿ ಬಿಲ್ಗಳನ್ನು ಸೃಷ್ಟಿಮಾಡಿ ಹಣ ಲಪಟಾಯಿಸಿದ್ದಾರೆ.
12 ವರ್ಷಗಳಿಂದ ಸಂಬಳವನ್ನೇ ತೆಗೆದುಕೊಳ್ಳದ ಒಬ್ಬ ಭ್ರಷ್ಟ ಅಧಿಕಾರಿ ಪೇಶ್ವೆ ಎಂಬುವರನ್ನು, ಈ ಸರ್ಕಾರ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿರುವುದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಕಾನೂನು ಇಲಾಖೆ ಕೂಡ ಕಣ್ಮುಚ್ಚಿ ಕೂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಧುಸ್ವಾಮಿ ಒಬ್ಬ ಡೈನಮಿಕ್ ವರ್ಕರ್ : ಈ ಹಿಂದೆ ಕಾನೂನು ಮಂತ್ರಿಯಾಗಿದ್ದ ಮಾಧುಸ್ವಾಮಿ ಅವರ ಸ್ಥಾನ ಬದಲಾವಣೆ ಮಾಡಿದರು. ಇಂತಹ ಭ್ರಷ್ಟಾಚಾರವನ್ನು ಖಂಡಿಸುವ ಮೂಲಕ ಇಂಥವಕ್ಕೆಲ್ಲ ಬಿಗಿ ಮಾಡ್ತಾರೆ ಎಂದೇ ಮಾಧುಸ್ವಾಮಿ ಮಂತ್ರಿಸ್ಥಾನವನ್ನು ಬದಲಾವಣೆ ಮಾಡಿದ್ದಾರೆ ಎಂದು ಮಾಧುಸ್ವಾಮಿ ಪರ ರೇವಣ್ಣ ಬ್ಯಾಟಿಂಗ್ ಮಾಡಿದರು.
ಮಾಧುಸ್ವಾಮಿ ಒಬ್ಬ ಡೈನಮಿಕ್ ವರ್ಕರ್, ಅವರು ಯಾವುದೇ ಪಕ್ಷದಲ್ಲಿದ್ದರೂ ಅದು ನನಗೆ ಬೇಕಾಗಿಲ್ಲ. ಆದರೆ, ಆತ ಭ್ರಷ್ಟಾಚಾರವನ್ನು ವಿರೋಧಿಸುತ್ತಾನೆ ಎಂಬ ಒಂದೇ ಒಂದು ಕಾರಣಕ್ಕೆ ಹಾಸನದಿಂದಲೇ ಆತನನ್ನು ಓಡಿಸಿದರು ಎಂದರು. ನೀರಾವರಿ ಖಾತೆ ಈಗ ಸಿಎಂ ಬಳಿಯೇ ಇರುವುದರಿಂದ ಈ ವಿಚಾರವಾಗಿ ಆದಷ್ಟು ಬೇಗ ತನಿಖೆ ಮಾಡಿಸುವಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕೋರಿದ್ದಾರೆ.