ಹಾಸನ: ನಗರದಲ್ಲಿ ಇತ್ತೀಚೆಗೆ ಅನ್ಯಕೋಮಿನ ಇಬ್ಬರು ಯುವಕರು ಬೈಕ್ ವ್ಹೀಲಿಂಗ್ ಮಾಡುವ ಮೂಲಕ ನಕಲಿ ಗನ್ ಹಿಡಿದುಕೊಂಡು ಸಂಚಾರ ನಿಯಮ ಉಲ್ಲಂಘಿಸಿರುವುದು ನಗರದಲ್ಲಿ ಆತಂಕ ಸೃಷ್ಟಿಸಿದೆ. ಶುಕ್ರವಾರ ನಕಲಿ ಗನ್ ಹಿಡಿದು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅನ್ಯಕೋಮುವಿನ ಯುವಕರನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಪಿಸ್ತೂಲ್ ಹಿಡಿದು ವಿವಿಧ ರಸ್ತೆಗಳಲ್ಲಿ ಬುಲೆಟ್ ಏರಿ ರೀಲ್ಸ್ ಮಾಡಿ ಆತಂಕ ಸೃಷ್ಟಿಸಿದ್ದ ರಿಯಾಜ್ ಪಾಶ ಮತ್ತು ಮಹಮ್ಮದ್ ಅಲಿ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನದ 80 ಅಡಿ ರಸ್ತೆಯಲ್ಲಿ ಬುಲೆಟ್ ಏರಿ ಇಬ್ಬರು ಯುವಕರು ಸಂಚಾರ ನಿಯಮವನ್ನು ಪಾಲಿಸದೆ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಾರೆ. ಕೈಯಲ್ಲಿ ಗನ್ ಹಿಡಿದು ಹೆಲ್ಮೆಟ್ ಧರಿಸದೇ ಸಂಚಾರ ಮಾಡಿರುವ ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದೆ. ಇವರ ಬೇಕಾಬಿಟ್ಟಿ ಸಂಚಾರದಿಂದ ಸಾರ್ವಜನಿಕ ವಲಯದಲ್ಲಿ ಆತಂಕ, ಆಕ್ರೋಶ ವ್ಯಕ್ತವಾದ ಬಂದ ಹಿನ್ನೆಲೆ, ಕೇವಲ ಒಂದು ಗಂಟೆಯ ಒಳಗೆ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಓರ್ವ ಬಾಲಕ ಮತ್ತು ಯುವಕ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆಸಿದ್ದರು. ಪರಿಣಾಮ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಈ ಅಪಘಾತ ಸಂಭವಿಸಿತ್ತು.
ಘಟನೆಯಲ್ಲಿ ಭೂಮಿಕಾ ಮತ್ತು ಸಿಂಚನಾ ಎಂಬುವರು ಗಾಯಗೊಂಡಿದ್ದರು. ವಿದ್ಯಾರ್ಥಿನಿ ಭೂಮಿಕಾಳ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಂಚನಾಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೈಕ್ ವ್ಹೀಲಿಂಗ್ ಮಾಡಿ ಈ ದುರ್ಘಟನೆಗೆ ಕಾರಣವಾದ ಯುವಕ ಶಾಕೀರ್ ಮತ್ತು ಇನ್ನೋರ್ವ ಬಾಲಕನಿಗೆ ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ.
ಸ್ಥಳಕ್ಕೆ ದೌಡಾಯಿಸಿ ವಶಕ್ಕೆ ಪಡೆದ ಪೊಲೀಸರು: ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತವೆಸಗಿದ ಇಬ್ಬರನ್ನು ವಶಕ್ಕೆ ಪಡೆದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದರು.
ಎಚ್ಚರಿಕೆ ಕೊಟ್ಟಿದ್ದ ಪೊಲೀಸ್ ವರಿಷ್ಠಾಧಿಕಾರಿ: ಮೊನ್ನೆ ಹೀಗೆ ಬೈಕ್ ವ್ಹೀಲಿಂಗ್ ಮಾಡುವುದು, ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಎಸ್ಪಿ ಅವರು ಮಕ್ಕಳ ಕೈಗೆ ಬೈಕ್ ಕೊಡುತ್ತಿರುವ ಪೋಷಕರಿಗೂ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ.. Bike wheeling: ಅಪ್ರಾಪ್ತರ ಬೈಕ್ ವ್ಹೀಲಿಂಗ್ನಿಂದ ಅಪಘಾತ: ಹಾಸನದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ