ಹಾಸನ: ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವೃತ್ತ ನಿರೀಕ್ಷಕರು ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ಲಕ್ಷಾಂತರ ರೂ. ಲಂಚ ಪಡೆಯುವ ದಂಧೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಸರ್ಕಾರ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಕೀಲ ಎಂ.ಕೆ. ಧರಣಿ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವೃತ್ತ ನಿರೀಕ್ಷಕರು ಮತ್ತು ಸಬ್ ಇನ್ಸಪೆಕ್ಟರ್ಗಳ ವರ್ಗಾವಣೆಯಲ್ಲಿ ಲಕ್ಷಾಂತರ ರೂ. ಲಂಚ ಪಡೆಯುತ್ತಿರುವುದು ವ್ಯಾಪಕವಾಗಿ ಪ್ರಚಾರವಾಗುತ್ತಿದೆ. ಈ ಹಿಂದೆ ಹಾಸನದಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಇದೀಗ ವೃತ್ತ ನಿರೀಕ್ಷಕರಾಗಿ ಮುಂಬಡ್ತಿ ಹೊಂದಿ ನಂತರ ಬೆಂಗಳೂರಿನ ಲೋಕಾಯುಕ್ತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಾಸನ, ಸಕಲೇಶಪುರ, ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ ಮತ್ತು ಆಲೂರು ತಾಲೂಕುಗಳಲ್ಲಿರುವ ಪೊಲೀಸ್ ಠಾಣೆಗಳಿಗೆ ತಮಗೆ ಬೇಕಾದವರನ್ನು ವೃತ್ತ ನಿರೀಕ್ಷಕರಾಗಿ ಮತ್ತು ಸಬ್ ಇನ್ಸ್‌ಪೆಕ್ಟರ್‌ಗಳನ್ನಾಗಿ ನೇಮಿಸಲು ಸಾಮರ್ಥ್ಯವಿರುವುದಾಗಿ ಹೇಳಿಕೊಂಡಿರುವ ಆಡಿಯೋ ಟೇಪ್ ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಅಧಿಕಾರಿಯೊಂದಿಗೆ ಫೋನ್ ಸಂಭಾಷಣೆಯಲ್ಲಿ ನಾನು ಹಾಸನ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ನೇಮಕಗೊಂಡಿರುವ ಆದೇಶ ಸದ್ಯದಲ್ಲಿಯೇ ಬರುವುದಾಗಿ ಹೇಳಿಕೊಂಡಿರುವುದು ಅಡಿಯೋ ಟೇಪ್‌ನಿಂದ ತಿಳಿದು ಬಂದಿದೆ ಎಂದು ಆರೋಪಿಸಿದರು.
ಹಾಸನದ ಬಿ.ಎಂ. ರಸ್ತೆಯಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದರ ಮಾಲೀಕರ ಮುಖಾಂತರ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿಸಿ, ಅಧಿಕಾರಿಗಳಿಗೆ ಅವರಿಗೆ ಇಚ್ಛೆ ಇರುವ ಸ್ಥಳಗಳಿಗೆ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿ ಅಧಿಕಾರಿಗಳಿಂದ ಲಕ್ಷಾಂತರ ರೂ. ಪಡೆದಯಲಾಗುತ್ತಿದೆ. ನಂತರ ಅಂತಹವರ ಪಟ್ಟಿ ಮಾಡಿ ಹಾಸನದ ವಿಧಾನಸಭಾ ಕ್ಷೇತ್ರದ ಶಾಸಕರ ಮುಖೇನ ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ಮಾಡಿಸಿಕೊಡುವುದಾಗಿ ತಿಳಿಸುತ್ತಾ ಅಕ್ರಮ ದಂಧೆ ನಡೆಸಲಾಗುತ್ತಿದೆ ಎಂದು ಎಂ.ಕೆ.ಧರಣಿ ಗಂಭೀರವಾಗಿ ಆರೋಪಿಸಿದ್ದಾರೆ.