ಸಕಲೇಶಪುರ : ಆಶಾ ಕಾರ್ಯಕರ್ತೆಯರಿಗೆ ಸರ್ಕಾರ ಕೂಡಲೇ ಗೌರವ ಧನ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರಿಂದ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಗೌರವ ಧನ ಹಾಗೂ ದಿನ ಭತ್ಯೆ ಸಿಗುತ್ತಿಲ್ಲ ಎಂಬ ದೂರನ್ನು ಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರು ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ₹3 ಸಾವಿರ ವಿಶೇಷ ಭತ್ಯೆ ನೀಡಿದೆ. ಆದರೆ, ಅದು 22 ಜನರಿಗೆ ಮಾತ್ರ ತಲುಪಿದೆ ಎಂದರು.
ಉಳಿದ 85 ಮಂದಿಗೆ ಯಾವುದೇ ಭತ್ಯೆ ಸಿಕ್ಕಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ರಾಜ್ಯಾದ್ಯಾಂತ ಇರುವ 42,000 ಸಾವಿರ ಆಶಾ ಕಾರ್ಯಕರ್ತೆಯರಿಗೆ ತಕ್ಷಣ ಗೌರವ ಧನ ಹಾಗೂ ದಿನ ಭತ್ಯೆ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತರ ಸಂಘದ ತಾಲೂಕು ಅಧ್ಯಕ್ಷೆ ಗೌರಮ್ಮ ಮಾತನಾಡಿ, ಸರ್ಕಾರ ನಮ್ಮ ಸೇವೆಗೆ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ. ಪ್ರತಿ ತಿಂಗಳಿಗೆ ₹12,000 ಗೌರವ ಧನ ನೀಡಲು ಕ್ರಮಕೈಗೊಳ್ಳಬೇಕು ಎಂದರು.