ಹಾಸನ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು 15 ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ 441 ಪ್ರಕರಣಗಳು ವರದಿಯಾಗಿವೆ. ಇದರ ಜೊತೆಗೆ ಇಂದು ಚೆನ್ನರಾಯಪಟ್ಟಣ ತಾಲೂಕಿನಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಸಾವಿಗೀಡಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಐದಕ್ಕೇರಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳು, ಪ್ರತಿನಿತ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಜಿಲ್ಲೆಯ ಜನರು ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸದೆ ಮತ್ತು ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಮತ್ತು ಕಚೇರಿಗೆ ತೆರಳುವ ಮುನ್ನ ಸ್ಯಾನಿಟೈಸರ್ ಬಳಸಿ ಕೆಲಸ ಪ್ರಾರಂಭಿಸಿ ಎಂದು ಸ್ಪಷ್ಟವಾಗಿ ಹೇಳಿದ್ದರು.
ಅನ್ಲಾಕ್ ಆದ ಬಳಿಕ ಕಚೇರಿಗೆ ಬರುವ ವ್ಯಕ್ತಿಗಳಿಂದ ವೈರಸ್ ಹರಡಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಟಪಾಲು ಶಾಖೆ ತೆರೆಯಲಾಗಿದೆ. ಅತ್ಯವಶ್ಯಕವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆಗಬೇಕಾದ ಕೆಲಸಕ್ಕೆ ಮಾತ್ರ ನಾಗರಿಕರನ್ನು ತಪಾಸಣೆಗೆ ಒಳಪಡಿಸಿ ಬಿಡುವ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ತಾತ್ಕಾಲಿಕವಾಗಿ ಕೆಲವು ನಿಯಮಗಳನ್ನು ಜಿಲ್ಲಾಧಿಕಾರಿಗಳು ವಿಧಿಸಿರುವುದರಿಂದ ಬೆಳಗ್ಗೆಯಿಂದ ಸಂಜೆತನಕ ಜನಜಂಗುಳಿಯಿಂದ ತುಂಬಿರುತ್ತಿದ್ದ ಡಿಸಿ ಕಚೇರಿ ಬಿಕೋ ಎನ್ನುತ್ತಿದೆ.