ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಯಡಿಕೇರಿ ಗ್ರಾಮದ ಯುವಕನಲ್ಲಿ ಕೊರೊನಾ ಲಕ್ಷಣ ಕಂಡು ಬಂದಿತ್ತು. ಇದರಿಂದ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಯುವಕನ ವರದಿ ನೆಗೆಟಿವ್ ಬಂದಿದ್ದು, ಗ್ರಾಮಸ್ಥರು ಕೊಂಚ ನಿರಾಳರಾಗಿದ್ದಾರೆ.
ಈ ಯುವಕ ತೆಲಂಗಾಣದ ಹೈದರಾಬಾದ್ನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ಹರಸಾಹಸ ಮಾಡಿ ವಾರದ ಹಿಂದೆ ತಾಲೂಕಿಗೆ ಆಗಮಿಸಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಕೆಮ್ಮಿನಿಂದ ನರಳುತ್ತಿದ್ದ.
ಈ ಹಿನ್ನೆಲೆ ಯುವಕನನ್ನು ಏ. 7ರಂದು ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಸಿಬ್ಬಂದಿ ತುರ್ತು ವಾಹನದ ಮೂಲಕ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಅದೃಷ್ಟವಶಾತ್ ಕೊರೊನಾ ನೆಗೆಟಿವ್ ಬಂದಿದೆ. ಆದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ.
ಜೊತೆಗೆ ಈತನ ಕುಟುಂಬದವರ ಆರೋಗ್ಯದ ತಪಾಸಣೆ ಮಾಡಲಾಗಿದ್ದು, ಇವರನ್ನೂ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಇದರಿಂದಾಗಿ ಗ್ರಾಮಸ್ಥರ ಆತಂಕ ದೂರವಾಗಿದೆ.