ಹಾಸನ: ಕೊರೊನಾ ತಪಾಸಣೆ ಹಾಗೂ ಚಿಕಿತ್ಸೆಗೆ ಗರಿಷ್ಠ ಸಿದ್ದತೆ ಮಾಡಿಕೊಳ್ಳಬೇಕು. ಸರ್ಕಾರದಿಂದ ವೆಂಟಿಲೇಟರ್ ಸೇರಿದಂತೆ ಅಗತ್ಯವಿರುವ ಹೆಚ್ಚುವರಿ ಸಾಧನ ಸಲಕರಣೆಗಳನ್ನು ಪೂರೈಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರಗಳ ಖಾತೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮುಂಜಾಗ್ರತೆ ಕುರಿತಂತೆ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದ ಅವರು, ಕೊರೊನಾ ಸೋಂಕು ದೇಶದಲ್ಲಿ 3ನೇ ಹಂತ ಪ್ರವೇಶಿಸಿದ್ದು, ಅದರ ನಿಯಂತ್ರಣಕ್ಕೆ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಅತ್ಯಂತ ವೇಗವಾಗಿ ಹರಡುತ್ತಿರುವ ಕಾರಣ ಆತಂಕ ಮೂಡಿಸಿದೆ. ಹಾಗಾಗಿ ಸೋಂಕು ವ್ಯಾಪಕವಾಗಿ ಸಮುದಾಯಗಳಲ್ಲಿ ಹಬ್ಬುವುದನ್ನು ತಡೆಯಲು ಮಾರ್ಚ್ 31 ರವರೆಗೆ ಹೆಚ್ಚಿನ ಮುಂಜಾಗ್ರತೆ ವಹಿಸಿ ಎಂದು ಸಚಿವರು ಕಟ್ಟಪ್ಪಣೆ ಮಾಡಿದರು.
ಪ್ರತಿದಿನ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಹಾಗೂ ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸುವಂತೆ ಸೂಚನೆ ನೀಡಿದ ಅವರು, ಅಗತ್ಯ ತುರ್ತು ಔಷಧಿ ಸಾಮಗ್ರಿಗಳ ಖರೀದಿಗೆ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಲು ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಿದ್ದು, ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಔಷಧಿಗಳನ್ನು ಖರೀದಿಸುವಂತೆ ನಿರ್ದೇಶನ ನೀಡಿದರು.
ಇನ್ನು ಮಕ್ಕಳಿಗೆ ರಜೆ ನೀಡಿರುವುದರಿಂದ ಹೊರಗಡೆ ಹೋಗದಂತೆ ಪೋಷಕರು ನೋಡಿಕೊಳ್ಳಬೇಕು. ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೊಡಿಸಬೇಕು. ಸಕ್ಕರೆ ಖಾಯಿಲೆ, ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕೊರೊನಾ ಸೋಂಕು ಬೇಗ ತಗುಲುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸಬೇಕು ಎಂದು ಸಚಿವರು ಹೇಳಿದರು.