ಸಕಲೇಶಪುರ: ಕೊರೊನಾ ಹಿನ್ನೆಲೆಯಲ್ಲಿ ದೇಶದಲ್ಲೆಡೆ ಲಾಕ್ಡೌನ್ ಮಾಡಲಾಗಿರುವುದರಿಂದ ತಾಲೂಕಿನ ಕೆಲವು ಹೋಬಳಿಗಳಲ್ಲಿ ಬೆಳೆಯುವ ತರಕಾರಿಗಳಿಗೆ ಮಾರುಕಟ್ಟೆಯಿಲ್ಲದೆ ತರಕಾರಿಗಳು ಗಿಡದಲ್ಲಿ ಕೊಳೆಯುವ ಸ್ಥಿತಿ ಉಂಟಾಗಿದೆ.
ತಾಲೂಕಿನ ಹೆತ್ತೂರು ಹಾಗೂ ಯಸಳೂರು ಹೋಬಳಿಗಳ ರೈತರು ಮೆಣಸಿನಕಾಯಿ, ಬೀನ್ಸ್, ಆಲಸಂದೆ ಬೆಳೆಗಳನ್ನು ಬೆಳೆದಿದ್ದರು. ಸ್ಥಳೀಯ ಮಾರುಕಟ್ಟೆಯ ಜೊತೆಗೆ ಮೆಣಸಿನಕಾಯಿ ಹಾಗೂ ಬೀನ್ಸ್ಗಳನ್ನು ಹೊರ ಜಿಲ್ಲೆಗಳಿಂದ ವರ್ತಕರು ಇಲ್ಲಿಗೆ ಬಂದು ಖರೀದಿ ಮಾಡಿ ಹೊರ ಊರುಗಳಲ್ಲಿ ಮಾರುತ್ತಿದ್ದರು. ಆದರೆ ಇದೀಗ ಲಾಕ್ಡೌನ್ನಿಂದ ಮಲೆನಾಡು ಬಹುತೇಕ ಸ್ತಬ್ಧವಾಗಿದೆ.
ಸಕಲೇಶಪುರ ಪಟ್ಟಣ ಸೇರಿದಂತೆ ಇಲ್ಲಿನ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ನಡೆಯುತ್ತಿದ್ದ ಸಂತೆಗಳು ರದ್ದುಗೊಂಡಿದೆ. ಇದರಿಂದಾಗಿ ತಾಲೂಕಿನಲ್ಲಿ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಇನ್ನು ಹೊರ ಜಿಲ್ಲೆಗಳ ವರ್ತಕರು ರಸ್ತೆಗಳು ಬಂದ್ ಆಗಿರುವುದರಿಂದ ತರಕಾರಿ ವ್ಯವಹಾರಕ್ಕೆ ಮುಂದಾಗುತ್ತಿಲ್ಲ. ಕಳೆದ ವರ್ಷ ಮೆಣಸಿನಕಾಯಿ ಕೆ.ಜಿಗೆ ಸುಮಾರು 25ರೂ ದರವಿದ್ದು ಇದೀಗ ಕೆ.ಜಿ ಮೆಣಸಿನಕಾಯಿಗೆ 6ರೂಳಿಗೆ ಇಳಿದಿದ್ದು, ಜೊತೆಗೆ ಕೂಲಿ ಕಾರ್ಮಿಕರ ಕೊರತೆ ಸಹ ಕಾಣುತ್ತಿರುವುದಿರಂದ ಅನೇಕ ರೈತರು ಮೆಣಸಿನಕಾಯಿಯನ್ನು ಕೊಯ್ಯಲು ಮುಂದಾಗಿಲ್ಲ.
ಹಾಗೆಯೇ ಬೀನ್ಸ್ಗೆ ತುಸು ಉತ್ತಮ ದರವಿದ್ದು, ಇದೀಗ ಕೆ.ಜಿ 45 ರೂಗಳಂತೆ ರೈತರು ಚಿಕ್ಕಮಗಳೂರು ಕಡೆಯ ವರ್ತಕರಿಗೆ ನೀಡುತ್ತಿದ್ದಾರೆ. ಇನ್ನು ಲಾಕ್ಡೌನ್ನಿಂದ ಬೀನ್ಸ್ಗೆ ಉತ್ತಮ ದರವಿದ್ದರು ಸಹ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಹಾಗೂ ಮೆಣಸಿನಕಾಯಿ ದರ ಪಾತಾಳಕ್ಕಿಳಿದಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಇನ್ನು ಸರ್ಕಾರ ಕೂಡಲೇ ಇತ್ತ ಗಮನವರಿಸಿ ಮೆಣಸಿನಕಾಯಿಗೆ ಉತ್ತಮ ದರ ನಿಗದಿ ಮಾಡಬೇಕಾಗಿದೆ ಎಂದು ರೈತರು ಮನವಿ ಮಾಡುತ್ತಿದ್ದಾರೆ.