ಹಾಸನ: ಕೆಎಸ್ಆರ್ಟಿಸಿ ನೌಕರರನ್ನ ರಾಜ್ಯ ಸರ್ಕಾರಿ ನೌಕರರಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ 2ನೇ ಘಟಕದ ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ನೂರಾರು ಸಿಬ್ಬಂದಿ ಶಾಂತಿಯುತ ಪತ್ರ ಚಳವಳಿ ನಡೆಸಿದ್ರು.
ನಗರದ ಕೆಎಸ್ಆರ್ಟಿಸಿಯ ಎರಡನೇ ಡಿಪೋ ನೌಕರರು, ಚಾಲಕ, ನಿರ್ವಾಹಕ ಮತ್ತು ಸಿಬ್ಬಂದಿ ಪತ್ರವನ್ನ ಕೈಯಲ್ಲಿ ಹಿಡಿದು ಮುಖ್ಯಮಂತ್ರಿಗಳಿಗೆ ರವಾನೆ ಮಾಡಿದ್ರು. ಸರ್ಕಾರದ ಅಂಗ ಸಂಸ್ಥೆಯಾದ ಕೆಎಸ್ಆರ್ಟಿಸಿ ನೌಕರರನ್ನ ಇತರ ಸರ್ಕಾರಿ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಈ ಸಂಸ್ಥೆಯ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸಲಾಗಿದೆ. ಅದೇ ರೀತಿ ನಮ್ಮನ್ನ ಕೂಡಾ ಪರಿಗಣಿಸಬೇಕು. ಅಲ್ಲಿರುವ ವೇತನ ರೀತಿಯಲ್ಲಿಯೇ ನಮಗೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ರಾಜ್ಯಾದ್ಯಂತ 4 ವಿಭಾಗದ ಸಂಸ್ಥೆಯ ನೌಕರರು, ಚಾಲಕರು, ಸಿಬ್ಬಂದಿ ಸೇರಿ ಪತ್ರ ಚಳವಳಿಯನ್ನ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ರು.
ಕಳೆದ ಒಂದೂವರೆ ದಶಕಗಳಿಂದ ವಿವಿಧ ಬೇಡಿಕೆಗಳನ್ನ ಸರ್ಕಾರದ ಮುಂದಿಡುತ್ತಾ ಬಂದಿದ್ರು. ಕಳೆದ 2008 ರಲ್ಲಿಯೂ ನಮ್ಮನ್ನ ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸುತ್ತೇವೆಂದು ಕುಮಾರಸ್ವಾಮಿ ಹೇಳಿದ್ರು. ಆದ್ರೆ ಈಗ ಮತ್ತೆ ಮುಖ್ಯಮಂತ್ರಿಯಾಗಿ, ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಹಾಗಿದ್ರು ಕೂಡ ನಮ್ಮ ಬೇಡಿಕೆಯನ್ನ ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಈ ಕಾರಣ ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ ಮತ್ತು ನೌಕರ ವರ್ಗದವರು ಆಯಾ ವಿಭಾಗದ ಡಿಪೋಗಳಲ್ಲಿ ಶಾಂತಿಯುತವಾದ ಪತ್ರ ಚಳವಳಿಯನ್ನ ಮಾಡ್ತಿದ್ದಾರೆ.