ಹಾಸನ: ನಿಂಬೆಹಣ್ಣಿನ ಸಹವಾಸ ಮಾಡಿ ಹಾಳಾಗೋದು ಸಿದ್ದರಾಮಣ್ಣ , ಎಂದು ಕಾಂಗ್ರೆಸ್ಸಿಂದ ಜೆಡಿಎಸ್ಗೆ ವಲಸೆ ಹೋಗಿದ್ದ ಕಾರ್ಯಕರ್ತನೊಬ್ಬ ಮನನೊಂದು ಸಿದ್ದರಾಮಯ್ಯ ಮುಂದೆ ತನ್ನ ಅಳಲನ್ನು ತೋಡಿಕೊಂಡ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿನಿಂದ ಅರಸೀಕೆರೆಗೆ ಹೊರಟಿದ್ದ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಬರಗೂರು ಹ್ಯಾಂಡ್ ಪೋಸ್ಟ್ ಬಳಿ ತನ್ನ ನೆಚ್ಚಿನ ನಾಯಕನಿಗೆ ಹಾರ ಹಾಕಿ ತನ್ನ ನೋವನ್ನು ತೋಡಿಕೊಂಡಿದ್ದಾನೆ.
ಅಣ್ಣ ನಾವು ಪಕ್ಷ ತೊರೆದು ಜೆಡಿಎಸ್ ಗೆ ಹೋಗಿ ತಪ್ಪು ಮಾಡಿಬಿಟ್ಟೆವು. ನಿಂಬೆಹಣ್ಣಿನ ಸಹವಾಸ ಮಾಡಿ ಹಾಳಾಗಿ ಹೋಗಿದ್ದೇವೆ. ಜಿಲ್ಲೆಯಲ್ಲಿ ಒಂದು ಕೆಲಸವನ್ನೂ ಮಾಡಿಕೊಳ್ಳಲು ಬಿಡಲಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಿದ್ದರಾಮಯ್ಯ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಂತರ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸರಿ ಬಿಡಪ್ಪ ಈಗಲಾದರೂ ಜ್ಞಾನೋದಯ ಆಯ್ತಲ್ಲ ಎಂದು ಕಾರ್ಯಕರ್ತನಿಗೆ ಹೇಳಿ, ಹಾರ ಹಾಕಿಸಿಕೊಂಡು ಅರಸೀಕೆರೆಯತ್ತ ಪಯಣ ಬೆಳೆಸಿದ್ದಾರೆ.