ಹಾಸನ: ಶಾಸಕರು ಹಾಗೂ ಸಂಸತ್ ಸದಸ್ಯರ ನಿಧಿಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳನ್ನ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಸ್ಥಳೀಯ ಶಾಸಕರ ಪ್ರದೇಶಾಭಿವೃಧ್ದಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜನ ಪ್ರತಿನಿಧಿಗಳು ಜನರಿಗೆ ನೀಡಿದ ಭರವಸೆಗಳಂತೆ ನಿಗದಿ ಪಡಿಸುವ ಅನುದಾನ ಸದ್ಬಳಕೆಯಾಗಬೇಕು ಎಂದು ನಿರ್ದೇಶನ ನೀಡಿದರು. ಜನ ಪ್ರತಿನಿಧಿಗಳು ಕಾಮಗಾರಿ ಆಯ್ಕೆ ಮಾಡಿ, ಅನುದಾನ ನಿಗದಿಪಡಿಸಿದ ತಕ್ಷಣ ಸಂಬಂಧಪಟ್ಟ ಕಾಮಗಾರಿ ಅನುಷ್ಠಾನವನ್ನು ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗದ ಲಭ್ಯತೆ, ಯಾವುದೇ ಸಮಸ್ಯೆಗಳಿಲ್ಲದೇ ಇರುವುದನ್ನು ಪರಿಶೀಲಿಸಿ ಮತ್ತು ಪ್ರಾರಂಭಿಕ ಸಭೆ ನಡೆಸಿ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ಸಲ್ಲಿಸಬೇಕು ಎಂದರು.
ಜನರ ಬೇಡಿಕೆ ಅನುಸಾರ ಶಾಸಕರು ಕೆಲಸಗಳನ್ನ ಆಯ್ಕೆ ಮಾಡಿರುತ್ತಾರೆ. ಅವುಗಳನ್ನು ವಿಳಂಬ ಮಾಡದೇ ನಿರ್ವಹಿಸಬೇಕು. ಶಾಲೆ ಅಂಗನವಾಡಿ, ರಸ್ತೆ, ಸಮುದಾಯ ಭವನ ಕಾಮಗಾರಿಗಳು ಬೇಗ ಮುಗಿಸಬೇಕು. ಇದೇ ರೀತಿ, ಅನುಮೋದನೆಯಾದ ಕಾಮಗಾರಿಗಳಿಗೆ ಶೇ.75ರಷ್ಟು ಅನುದಾನ ಬಿಡುಗಡೆ ಮಾಡಿ, ಇಲಾಖೆಗಳು ಲಭ್ಯವಿರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿ, ಹಣವನ್ನು ವೆಚ್ಚ ಮಾಡಿ ತಮ್ಮ ಗಮನಕ್ಕೆ ತಂದ ತಕ್ಷಣ ಅಗತ್ಯವಿರುವ ಹಣವನ್ನ ಬಿಡುಗಡೆ ಮಾಡಲಾಗುವುದು ಎಂದರು.
ಇನ್ನು, 2018-19ನೇ ಸಾಲಿನ ಬಾಕಿ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ. ಈಗಾಗಲೇ ಮುಗಿಸಿರುವ ಕೆಲಸಗಳಿಗೂ ಹಣ ಬಿಡುಗಡೆಯಾಗಿಲ್ಲ. ಮುಂದೆ ಇಂತಹ ಲೋಪಗಳು ಮುಂದುವರಿಯಬಾರದು. ಸರ್ಕಾರ ನಿಗದಿಪಡಿಸಿರುವ ಅನುದಾನ ಆಯಾಯ ಅವಧಿಯಲ್ಲಿ ಒದಗಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಯಾವುದೇ ಅನುಮೋದನೆ, ಬದಲಾವಣೆಗಳ ಬಾಕಿ ಇದ್ದರೆ, ಅಧಿಕಾರಿಗಳು ನೇರವಾಗಿ ತಮ್ಮನ್ನು ಭೇಟಿ ಮಾಡಿ ಚರ್ಚಿಸಬಹುದಾಗಿದೆ. ತಾವು ಎಲ್ಲಾ ಕಡತಗಳನ್ನು ವಿಳಂಬವಿಲ್ಲದೇ, ವಿಲೇವಾರಿ ಮಾಡುತ್ತಿರುವುದಾಗಿ ಹೇಳಿದರು.