ಹಾಸನ: ಶಾಸಕ ಪ್ರೀತಂಗೌಡ ನೇತೃತ್ವದಲ್ಲಿ ಕೈಗೊಂಡ ಹಲವು ಕಾಮಗಾರಿಗಳಲ್ಲಿ ಹಾಸನದಲ್ಲಿ ಹಳೆತಾಲೂಕು ಕಚೇರಿ ಕೆಡವಿ ನೂತನವಾಗಿ ನಿರ್ಮಿಸುವುದು ಮತ್ತು ಟ್ರಕ್ ಟರ್ಮಿನಲ್ ಕೂಡ ಸೇರಿದ್ದವು. ಆದ್ರೆ, ಇವೆರೆಡು ಕಾಮಗಾರಿಗಳನ್ನು ಮಾಜಿ ಸಚಿವ ಹೆಚ್. ಡಿ. ರೇವಣ್ಣ ವಿರೋಧಿಸುತ್ತಲೇ ಬಂದಿದ್ದರು. ಒಂದು ಕಡೆ ಟ್ರಕ್ ಟರ್ಮಿನಲ್ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲೂ ರೇವಣ್ಣ ಯಶಸ್ವಿಯಾಗಿದ್ರು. ಆದ್ರೆ ರೇವಣ್ಣ ಅವರನ್ನೇ ಯಾಮಾರಿಸಿ ಇದೀಗ ರಾತ್ರೋರಾತ್ರಿ ಹಾಸನ ತಾಲೂಕು ಕಚೇರಿ ಕೆಡವಿದ್ದು, ಹಾಸನದಲ್ಲಿ ಮತ್ತೊಂದು ಜಿದ್ದಾಜಿದ್ದಿಗೆ ಕಾರಣವಾದಂತಾಗಿದೆ.
ಟ್ರಕ್ ಟರ್ಮಿನಲ್ ವಿರೋಧಿಸಿ ಹೆಚ್ ಡಿ.ರೇವಣ್ಣ ಆ್ಯಂಡ್ ಸನ್ಸ್ ಹೋರಾಟಕ್ಕಿಳಿದ ಪರಿಣಾಮ ಇದೀಗ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಹೋರಾಟ ನಡೆಸಿದ್ರು. ಅವರಿಗೆ ಹೆಚ್.ಡಿ. ರೇವಣ್ಣ ಬೆಂಬಲ ಸೂಚಿಸಿದ್ರು. ಆದ್ರೆ, ಯಾವುದೇ ಕಾರಣಕ್ಕೂ ಟ್ರಕ್ ಟರ್ಮಿನಲ್ ನಿಲ್ಲಿಸಲ್ಲ ಎಂದು ಶಾಸಕ ಪ್ರೀತಂಗೌಡ ಸವಾಲು ಹಾಕಿದ್ರು. ಇದಾದ ನಂತರ ನಿನ್ನೆ ರೇವಣ್ಣ ಮತ್ತು ಅವರ ಪುತ್ರರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಮಗಾರಿ ತಡೆದು, ಕಾಂಪೌಂಡ್ ಗೋಡೆ ಕೆಡವಲಾಗಿತ್ತು. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕಾಮಗಾರಿ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದಾರುಣ ಸಾವು
ಕೇವಲ ಟ್ರಕ್ ಟರ್ಮಿನಲ್ ವಿಚಾರವಲ್ಲ. ಹಾಸನದಲ್ಲಿ ಈಗಿರುವ ಹಾಸನ ತಾಲೂಕು ಕಚೇರಿ ಕೆಡವಿ, ನೂತನವಾಗಿ ತಾಲೂಕು ಕಚೇರಿ ನಿರ್ಮಿಸಲು ಶಾಸಕ ಪ್ರೀತಂಗೌಡ ಯೊಜನೆ ರೂಪಿಸಿದ್ರು. ಆದ್ರೆ ಅದಕ್ಕೂ ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ. ಈಗಿರುವ ಹಳೇಕಟ್ಟಡವೇ ಇರಬೇಕೆಂದು ರೇವಣ್ಣ ಪಟ್ಟುಹಿಡಿದಿದ್ರು. ಯಾವಾಗ ಟ್ರಕ್ ಟರ್ಮಿನಲ್ ಕೆಲಸವನ್ನು ರೇವಣ್ಣ ಆ್ಯಂಡ್ ಸನ್ಸ್ ತಡೆಹಿಡಿದ್ರೋ, ಇದೀಗ ರಾತ್ರೋರಾತ್ರಿ ಹಾಸನ ತಾಲೂಕು ಕಚೇರಿಯನ್ನು, ಕಿಟಕಿ ಬಾಗಿಲುಗಳ ಸಮೇತವೇ ನೆಲಕ್ಕುರುಳಿಸುವ ಕೆಲಸ ಮಾಡಿಸಿರುವ ಶಾಸಕ ಪ್ರೀತಂಗೌಡ, ಹೆಚ್. ಡಿ. ರೇವಣ್ಣರಿಗೆ ಈ ಮೂಲಕ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ.
ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಹಾಸನದಲ್ಲಿ ಅಭಿವೃದ್ಧಿ ಹೆಸರಲ್ಲಿ ಶಾಸಕ ಪ್ರೀತಂಗೌಡ ಮತ್ತು ಹೆಚ್ ಡಿ. ರೇವಣ್ಣ ನಡುವಿನ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ. ನನ್ನ ಅಭಿವೃದ್ಧಿ ಕೆಲಸಕ್ಕೆ ರೇವಣ್ಣ ಬೇಕಂತಲೇ ಸಮಸ್ಯೆ ಮಾಡ್ತಿದ್ದಾರೆ. ಅನ್ನೋದು ಶಾಸಕ ಪ್ರೀತಂಗೌಡ ಆರೋಪವಾದ್ರೆ, ಇದೆಲ್ಲ ಕೇವಲ ಹಣ ಮಾಡುವ ಕಾಮಗಾರಿ ಅನ್ನೋದು ರೇವಣ್ಣ ಆರೋಪವಾಗಿದೆ.