ಹಾಸನ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂದರ್ಭದಲ್ಲಿ ನೊರನಕ್ಕಿ, ಕುಂಭೇನಹಳ್ಳಿ, ನಂಬಿಹಳ್ಳಿ, ಆನೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಫೋಟೋ ವಿಚಾರವಾಗಿ ಬಿಜೆಪಿ-ಜೆಡಿಎಸ್ ನಡುವೆ ಆರಂಭವಾದ ಮುಸುಕಿನ ಗುದ್ದಾಟ ಈಗ ಪೊಲೀಸ್ ಠಾಣೆ ತಲುಪಿದೆ.
ಗ್ರಾ.ಪಂ ಕಚೇರಿಯಲ್ಲಿ ಸೆ.17ರಂದು ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ನಿಮಿತ್ತ ಗ್ರಾ.ಪಂ ಸದಸ್ಯರಾದ ಭಾರ್ಗವಿ, ಚಂದ್ರಕಲಾ, ನಿಂಗೇಗೌಡ, ಲಕ್ಷ್ಮೀಶ ಮತ್ತು ಬಿಜೆಪಿ ಮುಖಂಡರಾದ ಗಿರೀಶ್, ಮಧು ಸೇರಿದಂತೆ 20ಕ್ಕೂ ಹೆಚ್ಚು ಜನರು ಕಚೇರಿಗೆ ಆಗಮಿಸಿ ಮೋದಿ ಭಾವಚಿತ್ರವನ್ನು ಅಧಿಕಾರಿಗಳ ವಿರೋಧದ ನಡುವೆಯೂ ಹಾಕಿದ್ದರು.
ಫೋಟೋ ಹಾಕಿದ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಅಧಿಕಾರಿ ವರ್ಗ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿಗಳು ಸರ್ಕಾರದ ಮಾರ್ಗದರ್ಶನವಿಲ್ಲದೇ ಹಾಕುವುದು ಬೇಡ ಎಂದು ಪಿಡಿಒ ರಮೇಶ್ ಕೂಡಾ ಸೂಚನೆ ನೀಡಿದ್ದರು. ಇದರೆ ನಡುವೆ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಭಾವಚಿತ್ರ ಅಳವಡಿಸಿದ್ದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮತ್ತೊಂದೆಡೆ, ಬಿಜೆಪಿ ಬೆಂಬಲಿತರು ಪಿಡಿಒ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಪಿಡಿಒ ಒಪ್ಪಿಗೆ ಪಡೆದು ನಾವು ಫೋಟೋ ಹಾಕಿದ್ದೆವು. ಆದರೀಗ ಅವಾಚ್ಯ ಶಬ್ದಗಳಿಂದ ಜಾತಿ ಬಗ್ಗೆ ನಿಂದಿಸಿದ್ದಾರೆ. ಯಾರೋ ಉತ್ತರ ಭಾರತದವನ ಫೋಟೋ ಹಾಕುತ್ತೀಯಾ ಎಂದು ಪ್ರಧಾನಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರು ಸೇರಿದಂತೆ ಹಲವರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿತ ಸದಸ್ಯೆ ಪಿಡಿಒ, ಬಿಲ್‌ಕಲೆಕ್ಟರ್, ಅಕೌಂಟೆಂಟ್, ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 16 ಜನರ ವಿರುದ್ಧ ದೂರು ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಪಿಡಿಒ ರಮೇಶ್ ಸೇರಿದಂತೆ ಗ್ರಾ.ಪಂ.ಅಧಿಕಾರಿಗಳು ಕಚೇರಿಯಲ್ಲಿ ಫೋಟೋ ಹಾಕುವುದು ಬೇಡ ಎಂದು ಸೂಚಿಸಿದ್ದರು. ಆದರೂ ಕರ್ತವ್ಯಕ್ಕೆ ಅಡ್ಡಿಪಡಿಸಿ ಫೋಟೋ ಹಾಕಿದ್ದಾರೆ. ಹೀಗಾಗಿ ನಾವು ಗ್ರಾ.ಪಂ ಸದಸ್ಯರಾದ ಭಾರ್ಗವಿ, ಚಂದ್ರಕಲಾ, ನಿಂಗೇಗೌಡ, ಲಕ್ಷ್ಮೀಶ ಮತ್ತು ಬಿಜೆಪಿ ಮುಖಂಡರಾದ ಗಿರೀಶ್, ಮಧು ಸೇರಿದಂತೆ 20 ಜನರ ವಿರುದ್ಧ ಪಿಡಿಒ ರಮೇಶ್ ಕೂಡಾ ಚನ್ನರಾಯಪಟ್ಟಣದ ಗ್ರಾಮಾಂತರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.