ಹಾಸನ: ರೈತರೊಬ್ಬರು 2.20 ಎಕರೆ ಜಮೀನಿನಲ್ಲಿ ಮಂಗಳೂರು ಸೌತೆ ಬೆಳೆದಿದ್ದು, ಲಾಕ್ಡೌನ್ ಕಾರಣ ಸೂಕ್ತ ಬೆಲೆ ಸಿಗದೇ ಅಪಾರ ನಷ್ಟ ಅನುಭವಿಸುತ್ತಿದ್ದಾರೆ.
ಜಾವಗಲ್ ಹೋಬಳಿ ನೇರ್ಲಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಮಲದೇವಿ ಹಳ್ಳಿಯ ರೈತ ರಂಗಪ್ಪ 2 ತಿಂಗಳ ಹಿಂದೆ ಸೌತೆ ಬೀಜ ನಾಟಿ ಮಾಡಿದ್ದರು. ಅದರಂತೆ ಉತ್ತಮ ಫಸಲು ಬಂದಿದೆ. ಆದರೆ ಸೂಕ್ತ ಮಾರುಕಟ್ಟೆ ಸೌಲಭ್ಯ ಹಾಗೂ ಉತ್ತಮ ಬೆಲೆ ಸಿಗದೆ ಬೆಳೆದು ನಿಂತಿರುವ ಫಸಲು ಕೊಳೆಯುತ್ತಿದ್ದು, ಖರ್ಚು ಮಾಡಿರುವ ಹಣವು ಸಿಗದಂತಾಗಿ ರೈತ ರಂಗಪ್ಪ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತಮ ಮಾರುಕಟ್ಟೆ ದೊರಕಿದ್ದಲ್ಲಿ ತಮ್ಮ ಫಸಲಿಗೆ ಸುಮಾರು 2-3 ಲಕ್ಷ ರೂ ಆದಾಯ ಸಿಗುತ್ತಿತ್ತು. ಆದರೀಗ ಖರ್ಚು ಮಾಡಿರುವ ಹಣವು ಸಿಗದಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಕೊಳೆಯುತ್ತಿದೆ ಎಂದು ಸಂತ್ರಸ್ತ ರೈತ ಅಳಲು ತೋಡಿಕೊಂಡಿದ್ದಾರೆ. ತಾಲೂಕು,ಜಿಲ್ಲಾಡಳಿತ ಮತ್ತು ಸರ್ಕಾರ ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಂಡಿದ್ದಾರೆ.