ಹಾಸನ: ಮೊನ್ನೆ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು, ಈ ಮೀಟಿಂಗ್ನಲ್ಲಿ ಭಾಗವಹಿಸಿದ್ದ 13 ಮಂತ್ರಿಗಳಿಗೆ ಮುಂದಿನ ಎರಡು ತಿಂಗಳುಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಚುನಾವಣೆಯಲ್ಲಿ ಸೋತ ಪ್ರಮುಖ ಶಾಸಕರನ್ನು ಪಕ್ಷಕ್ಕೆ ಕರೆತರುವಂತೆ ಟಾಸ್ಕ್ ಕೊಟ್ಟಿದ್ದಾರೆ. ಈ ಬಗ್ಗೆ ಸಿಎಂ ಸೂಚನೆ ಕೊಟ್ಟಿರುವ ಬಗ್ಗೆ ನೀವೇ (ಮಾಧ್ಯಮಗಳು) ಸುದ್ದಿ ಪ್ರಕಟಿಸಿದ್ದೀರಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲದ ಸಂದರ್ಭದಲ್ಲಿ ಹೊರಗಡೆ ಹೋಗುವುದು ಬೇಡ. ನಮ್ಮಲ್ಲೇ ಕೂತು ಚರ್ಚೆ ಮಾಡೋಣ ಎಂಬ ಸಲಹೆ ಬಂದಿತ್ತು. ನಮ್ಮ ಶಾಸಕರ ಅಭಿಪ್ರಾಯ ಕೂಡ ಅದೇ ಆಗಿತ್ತು. ಹಾಗಾಗಿ ಹಾಸನಾಂಬೆಯ ದರ್ಶನ ಮಾಡಿ ಇಲ್ಲೇ ಹಾಸನದಲ್ಲಿ ಸಭೆಗೆ ಸ್ಥಳ ನಿಗದಿಪಡಿಸಲಾಗಿತ್ತು. ಅದರಂತೆ ಸಭೆಯಾಗಿದೆ. ನಾನು ದುಬೈನಲ್ಲಿದ್ದಾಗ ಕೆಲವು ಮಾಧ್ಯಮಗಳಲ್ಲಿ ನಮ್ಮ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಎಂಟು ಜನ ಜೆಡಿಎಸ್ ಶಾಸಕರು ಪಕ್ಷ ಬಿಡುವ ಬಗ್ಗೆ ಮಾತುಕತೆ ನಡೆದಿದೆ ಅಂತಾ ಬಂದಿತ್ತು.
ಈ ಎಲ್ಲದರ ಹಿನ್ನೆಲೆಯಲ್ಲಿ ಸಭೆ ಕರೆದು ಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ, ತಮ್ಮ ಮಂತ್ರಿಗಳಿಗೆ 50 ಜನರನ್ನು ಪಕ್ಷಕ್ಕೆ ತರುವಂತ ಟಾಸ್ಕ್ ಕೊಟ್ಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಶಾಸಕರನ್ನೂ ಒಳಗೊಂಡಂತೆ ಬಹಳ ಜನ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಜೆಪಿಯ ಆಪರೇಷನ್ ಕಮಲ ನಡೀತಾ ಇದೆ ಎಂದು ಪ್ರಿಯಾಂಕ್ ಖರ್ಗೆ ಬಾಂಬೆ ಪ್ರವಾಸದ ಹೆಸರಿನಲ್ಲಿ ಆಪರೇಷನ್ ತಡೆಯೋದಕ್ಕೆ ಬಹಳ ಕಸರತ್ತು ಮಾಡುತ್ತಿದ್ದಾರೆ ಎಂಬುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ತಿಳಿಸಿದರು.
ನಾವು ಯಾರನ್ನೂ ಕರೆಯೋಲ್ಲ, ಬಂದ್ರೆ ಸ್ವಾಗತ ಅಂತಾ ಸಿಎಂ ಹೇಳಿದ್ದಾರೆ. ಮೊನ್ನೆಯೇ ನಾನು ಡಿಸಿಎಂಗೆ ಹೇಳಿದೆ. ಯಾಕಪ್ಪ ಸಂಪರ್ಕ ಮಾಡ್ತೀರಿ, ನೀವು ಮುಖ್ಯಮಂತ್ರಿ ಆಗೋದಾದರೆ ನಾನೇ ಬೆಂಬಲ ಕೊಡುತ್ತೇನೆ ಅಂತ. 136 ಶಾಸಕರೊಂದಿಗೆ ಸ್ಪಷ್ಟ ಬಹುಮತ ಇದ್ದರೂ ಯಾಕೆ ಈ ಭಯ? ಗಾಜಿನ ಮನೆಯಲ್ಲಿ ಕೂತಿರೋದು ನೀವು. ಹೆಗಣ ಸತ್ತು ಬಿದ್ದಿರೋದು ನಿಮ್ಮ ತಟ್ಟೆಯಲ್ಲಿ. ನಮ್ಮ ಶಾಸಕರ ಮೇಲೆ ಮಾನಸಿಕ ಒತ್ತಡ ತರುವ ಕೀಳು ಮಟ್ಟದ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಿನ್ನೆ ರಾತ್ರಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಶರಣಗೌಡ ಕುಂದಕೂರ್ ಹೊರತುಪಡಿಸಿ ಉಳಿದೆಲ್ಲಾ ಶಾಸಕರು ಭಾಗಿಯಾಗಿದ್ದಾರೆ. ಶಾರದ ಪೂರ್ಯಾ ನಾಯಕ್ ಅವರು ಈ ಸಭೆಯಲ್ಲಿ ಭಾಗಹಿಸಿ ವಾಪಸ್ ಕೆಡಿಪಿ ಸಭೆಗೆ ಹೋಗಿದ್ದಾರೆ. ಮುಳಬಾಗಿಲು ಸಮೃದ್ದಿ ಮಂಜುನಾಥ್ ಹಾಗೂ ಹನೂರು ಶಾಸಕ ಮಂಜುನಾಥ್ ಸಭೆಯಲ್ಲಿ ಭಾಗಿಯಾಗಿ ದರ್ಶನ ಮಾಡಿ ಬೆಳಿಗ್ಗೆ ಹೋಗಿದ್ದಾರೆ.
ನಿನ್ನೆಯ ಸಭೆಯಲ್ಲಿ 18 ಶಾಸಕರು ಭಾಗವಹಿಸಿದ್ದಾರೆ. 19 ಶಾಸಕರು, ನಮ್ಮ ಮನೆಯ ಸದಸ್ಯರು ಆಗಿದ್ದು, ಅವರಿಗೆ ಅಲ್ಪಸ್ವಲ್ಪ ಗೊಂದಲ ಇದೆ, ಅದನ್ನು ಸರಿಪಡಿಸುತ್ತೇವೆ. ಕಾಂಗ್ರೆಸ್ನ ಬಲವಂತಕ್ಕೆ ಪಕ್ಷ ತೊರೆಯುವವರು ಯಾರೂ ನಮ್ಮಲ್ಲಿ ಇಲ್ಲ. ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಈ ಕ್ಷಣದವರೆಗೂ ಇಲ್ಲ ಎಂದರು.
ಇದನ್ನೂ ಓದಿ: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಡಿವಿ ಸದಾನಂದಗೌಡ