ಹಾಸನ: ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಡಿಕೇರಿಯಿಂದ ಹೊರಟ ಜಾಥಾ ಹಾಸನ ನಗರಕ್ಕೆ ಆಗಮಿಸಿದ ನಂತರ ಬೃಹತ್ ಮೆರವಣಿಗೆ ಮತು ಬಹಿರಂಗ ಸಭೆ ನಡೆಸಲಾಯಿತು. ನಗರದ ಮಹಾವೀರ ವೃತ್ತದಿಂದ ಹೊರಟ ಬೃಹತ್ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಛೇರಿ ಆವರಣ ತಲುಪಿತು.
ಅಂಗನವಾಡಿ ನೌಕರರು ಅರೆಕಾಲಿಕ ಪಡೆಗೆ ಸೇರಿದವರು. ಆದರೆ ಇಂದು ಉದಾರೀಕರಣ ನೀತಿಗಳನ್ನು ಅಪ್ಪಿಕೊಂಡು ಮುದ್ದಾಡುತ್ತಿರುವ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಖಾಸಗಿ ಮಾಡುತ್ತಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮುಖಾಂತರ ಬಲಹೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದು ಕೊಳ್ಳುವುದಲ್ಲದೇ ಐಸಿಡಿಎಸ್ ಯೋಜನೆ ತನ್ನ ಉದ್ದೇಶ ಕಳೆದುಕೊಳ್ಳಲಿದೆ ಎಂದು ಅಳಲು ತೋಡಿಕೊಂಡ್ರು.
ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಇತ್ತೀಚೆಗೆ ಮಾಡಿರುವ ಶಿಫಾರಸ್ಸಿನಲ್ಲಿ 3 ರಿಂದ 4 ವರ್ಷದ ಒಂದು ವರ್ಗೀಕರಣ ಮಾಡಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯಡಿಯಲ್ಲಿ ತೆರೆಯಬೇಕೆಂಬ ಶಿಫಾರಸ್ಸು ಮಾಡಿದೆ. ಮಾತ್ರವಲ್ಲದೆ ರಾಜ್ಯದಲ್ಲಿ 2019 ಮೇ ತಿಂಗಳಲ್ಲಿ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 4200 ಕೋಟಿ ರೂ.ಗಳನ್ನು ಪೂರಕ ಪೌಷ್ಠಿಕ ಆಹಾರ, ಪೂರ್ವಪ್ರಾಥಮಿಕ ಶಿಕ್ಷಣವನ್ನೊಳಗೊಂಡಂತೆ ಖರ್ಚು ಮಾಡಲಾಗುತ್ತಿದೆ. ಆದರೆ ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡುವ ಬದಲಿಗೆ ಶಿಕ್ಷಣ ಇಲಾಖೆಯ ಮುಖಾಂತರ ಒಂದೇ ಮಗುವಿಗೆ ಡಬಲ್ ಹಣವನ್ನು ಖರ್ಚು ಮಾಡಲು ಹೊರಟಿರುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದರು.
ಬೇಡಿಕೆಗಳು:
ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್.ಕೆ.ಜಿ - ಯು.ಕೆ.ಜಿ ಶಿಕ್ಷಣ ನೀಡಿ, ಬದಲಾದ ಸಮಾಜದ ರೀತಿಯಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ಈಗಿರುವ ಅಂಗನವಾಡಿ ಕೇಂದ್ರ ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕಿಯನ್ನು ಕೊಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲಾ ರೀತಿಯ ಗುಣಾತ್ಮಕ ಮೂಲಭೂತ ಸೌಲಭ್ಯಗಳನ್ನೊದಗಿಸಬೇಕು. 1995 ರಿಂದ ಪ್ರಾರಂಭವಾಗಿರುವ ಎಲ್ಲಾ ಯೋಜನೆಗಳಲ್ಲಿ ಆಯ್ಕೆಯಾಗಿರುವ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಎಸ್.ಎಸ್.ಎಲ್.ಸಿ ಪಾಸಾದವರು ಅನೇಕರು ಪದವೀಧರರು ಆಗಿರುವುದರಿಂದ ಅವರಿಗೆ ತರಬೇತಿಯನ್ನು ಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಯ್ತು.