ಹಾಸನ : ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ಎರಡನೇ ಮದುವೆಯಾಗಿ ಮೊದಲ ಹೆಂಡತಿಯ ಮಗುವನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು, ಕೀನ್ಯಾ ದೇಶಕ್ಕೆ ತೆರಳಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗುವನ್ನ ರಕ್ಷಣೆ ಮಾಡುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ರಿಜ್ವಾನ್ ಅಹಮದ್ ಎಂಬುವರು ಮಗುವನ್ನ ಬಚ್ಚಿಟ್ಟು ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ಎರಡನೇ ಮದುವೆಯಾಗಿ ಹೊರದೇಶಕ್ಕೆ ಪರಾರಿಯಾಗಿರುವ ಆರೋಪಿ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಏನಿದು ಪ್ರಕರಣ? : ಕಳೆದ ಏಳು ವರ್ಷಗಳ ಹಿಂದೆ ಅಂದರೆ 2016ರಲ್ಲಿ ಹಾಸನ ಮೂಲದ ನಾಜ್ನೀನ್ ಎಂಬುವರ ಜೊತೆ ರಿಜ್ವಾನ್ ಅಹಮದ್ ಮದುವೆಯಾಗಿದ್ದು, ದಂಪತಿಗೆ ಐದು ವರ್ಷದ ಹೆಣ್ಣು ಮಗಳೊಬ್ಬರಿದ್ದಾರೆ. ಮದುವೆಯಾದ ನಂತರದ ದಿನಗಳಲ್ಲಿ ಪತಿ ಮತ್ತು ಪತ್ನಿ ಇಬ್ಬರು ದುಬೈನಲ್ಲಿ ವಾಸವಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದುಬೈನಿಂದ ಪತ್ನಿಯನ್ನು ಕರೆದುಕೊಂಡು ಬಂದು ಹಾಸನದ ಪತ್ನಿಯ ತವರು ಮನೆಗೆ ಬಿಟ್ಟು ಹೋಗಿದ್ದರು. ಇದಾದ ಕೆಲವು ತಿಂಗಳ ಬಳಿಕ ಪತಿ ರಿಜ್ವಾನ್ ಅಹಮದ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಮಗುವನ್ನ ಕರೆದುಕೊಂಡು ಹೋಗಿ ತನ್ನ ತಂದೆ ತಾಯಿಯ ಬಳಿ ಬಿಟ್ಟು ಕೀನ್ಯಾ ದೇಶಕ್ಕೆ ತೆರಳಿದ್ದ ಎಂಬ ಆರೋಪವನ್ನು ಮೊದಲ ಪತ್ನಿ ಕಡೆಯವರು ಮಾಡಿದ್ದರು. ಅಷ್ಟೇ ಅಲ್ಲ ಮಗು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ತಾಯಿ ನಾಜ್ನೀನ್, ಪತಿ ಮನೆ ಮತ್ತು ತಮ್ಮ ಸಂಬಂಧಿಕರ ಮನೆಗಳಲ್ಲೆಲ್ಲ ಹುಡುಕಿದ್ದಾರೆ. ಆಗಲೂ ಮಗು ಸಿಗದ ಕಾರಣ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿದ್ದರು.
ಕುಟುಂಬಸ್ಥರ ಮೇಲೂ ಮುಂದುವರಿದ ತನಿಖೆ : ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಕೂಡಾ ಮಗು ಎಲ್ಲಿದೆ ಎಂಬುದು ಗೊತ್ತಾಗಿಲ್ಲ. ಕೊನೆಗೆ ತನಿಖೆ ಮುಂದುವರಿಸಿದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ರಕ್ಷಣಾ ಘಟಕದ ಮೂಲಕ ಪತಿ ರಿಜ್ವಾನ್ ಅಹಮದ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಮಗುವನ್ನು ಬಚ್ಚಿಟ್ಟಿದ್ದರ ಜೊತೆಗೆ ಆರೋಪಿ, ತನ್ನ ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ ಎರಡನೇ ಮದುವೆಯಾಗಿ ಕೀನ್ಯಾಗೆ ತೆರಳಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಈ ಸಂಬಂಧ ಮಗು ನಾಪತ್ತೆ ಹಾಗೂ ಎರಡನೇ ಮದುವೆಯಾಗಿದ್ದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ಪ್ರಕರಣಗಳು ದಾಖಲು ಮಾಡಿಕೊಂಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಟುಂಬಸ್ಥರ ಮೇಲೂ ಈಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹಣ ವಾಪಸ್ ಪಡೆಯಲು ಅಜ್ಜನಿಂದಲೇ ಮೊಮ್ಮಗನ ಅಪಹರಣ( ಭಟ್ಕಳ): ಇನ್ನೊಂದೆಡೆ ಭಟ್ಕಳದ ಬಾಲಕನ ಅಪಹರಣ (ಆಗಸ್ಟ್ 22-2022) ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಕೊಟ್ಟ ಹಣ ವಾಪಸ್ ಪಡೆಯಲು ಸ್ವತಃ ಅಜ್ಜನೇ ಮೊಮ್ಮಗನನ್ನು ಅಪಹರಣ ಮಾಡಿಸಿದ್ದಾರೆ ಎಂಬುದು ತಿಳಿದು ಬಂದಿತ್ತು. ಸೌದಿ ಅರೇಬಿಯಾದಲ್ಲಿರುವ ಬಾಲಕನ ಅಜ್ಜ ಇನಾಯತುಲ್ಲಾ ಮೊಮ್ಮಗನ ಕಿಡ್ನ್ಯಾಪ್ಗೆ ಸ್ಕೆಚ್ ಹಾಕಿರುವ ಆರೋಪಿ. ಬಾಲಕನ ತಾಯಿಯ ಸಂಬಂಧಿಯಾಗಿರುವ ಇನಾಯತುಲ್ಲಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು.
ಸೋಮವಾರ ಗೋವಾದ ಕಲ್ಲಂಗುಟ್ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದ. ಬಾಲಕನ ಜತೆಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಭಟ್ಕಳ ಬದ್ರಿಯಾ ನಗರದ ನಿವಾಸಿ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾ ಬಂಧಿತ ಆರೋಪಿ. ಬಾಲಕನ ಅಜ್ಜನ ಸೂಚನೆಯಂತೆ ಅನೀಸ್ ಭಾಷಾ ತಂಡದೊಂದಿಗೆ ಕಿಡ್ನ್ಯಾಪ್ ಮಾಡಿದ್ದ. ಪ್ರಕರಣದ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದರು.
ಇದನ್ನೂ ಓದಿ: ನೀರು ಕುಡಿಸುವ ನೆಪದಲ್ಲಿ ಅಂಧ ದಂಪತಿಯ ಗಂಡು ಮಗು ಕಿಡ್ನ್ಯಾಪ್.. ಮಕ್ಕಳ ಕಳ್ಳಿ ಪತ್ತೆಗೆ ಖಾಕಿ ಬಲೆ