ಹಾಸನ/ಬೇಲೂರು: ದೇವಾಲಯದ ಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಬಳ್ಳೂರು ಪಾಳ್ಯ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಅರ್ಚಕ ಮಂಜುನಾಥ್ ಎಂಬುವವರ ಮಗ ದರ್ಶನ್ (11 ) ಮೃತಪಟ್ಟಿದ್ದರೆ, ಪತ್ನಿ ಲತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವಿವರ: ಶನೇಶ್ವರ ದೇವರ ಜಾತ್ರೆ ಇದ್ದ ಕಾರಣ ದೇವಾಲಯದ ಬಿರುಕು ಬಿಟ್ಟ ಗೋಡೆಯನ್ನು ಅರ್ಚಕ ಮಂಜುನಾಥ್, ಪತ್ನಿ ಲತಾ ದುರಸ್ತಿ ಮಾಡುತ್ತಿದ್ದರು. ಸ್ವಚ್ಛತಾ ಕಾರ್ಯ ಮಾಡುವಾಗ ದಿಢೀರ್ ಆಗಿ ಗೋಡೆ ಕುಸಿದು ಬಿದ್ದ ಪರಿಣಾಮ ಗೋಡೆಯ ಅವಶೇಷದಡಿ ಸಿಲುಕಿದ ಬಾಲಕ ಮೃತಪಟ್ಟರೆ, ಜೊತೆಗಿದ್ದ ತಾಯಿ ಲತಾ ಗಂಭೀರ ಗಾಯಗೊಂಡಿದ್ದಾರೆ.
ಓದಿ: ಹಸು ಕಾಣೆಯಾಗಿದ್ದಕ್ಕೆ ಮನೆಯವರು ಹೊಡೆಯುತ್ತಾರೆಂದು ಹೆದರಿ ಬಾಲಕ ಆತ್ಮಹತ್ಯೆ
ಸ್ಥಳೀಯರು ತಕ್ಷಣವೇ ಬಂದು ಗೋಡೆ ಅಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಬಾಲಕನನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.