ಚನ್ನರಾಯಪಟ್ಟಣ (ಹಾಸನ): ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ಪುರಸಭೆ ನಗರದ ರಸ್ತೆ ಬದಿಯಲ್ಲಿ ನಿರ್ಮಿಸಿದ್ದ ವಾಕಿಂಗ್ ಫುಟ್ಪಾತ್ ಈಗ ಕಸದ ರಾಶಿಯಿಂದ ಕೂಡಿ ಗಬ್ಬುನಾರುತ್ತಿದೆ.
ಹೌದು, ಪುರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಗರದ ಗೂರನಹಳ್ಳಿ ಗೇಟ್ ಬಳಿ ಸಾಗಿರುವ ರಸ್ತೆ ಬದಿಯಲ್ಲಿ ವಾಕಿಂಗ್ ಫುಟ್ಪಾತ್ ನಿರ್ಮಿಸಿದೆ. ಸುತ್ತ ಹಸಿರು ಮರಗಿಡಗಳಿದ್ದು, ಶುದ್ಧ ಗಾಳಿಯಲ್ಲಿ ಜನ ವಾಕಿಂಗ್, ವ್ಯಾಯಾಮ ಮಾಡಲಿ ಎಂಬ ಉದ್ದೇಶದಿಂದ ನಿರ್ಮಾಣವಾದ ಈ ಫುಟ್ಪಾತ್ನಲ್ಲಿ ಜನ ಎಲ್ಲ ತರಹದ ತ್ಯಾಜ್ಯ ಎಸೆದು ಹಾಳುಮಾಡಿದ್ದಾರೆ. ಇತ್ತ ರಾತ್ರಿಯಾದರೆ ಸಾಕು ಇದು ಕುಡುಕರ ಅಡ್ಡೆಯಾಗಿ ಬಳಕೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಇನ್ನೂ ವಾಕಿಂಗ್ ಫುಟ್ಪಾತ್ ನಿರ್ಮಾಣ ಕಾರ್ಯವಾದ ಬಳಿಕ ಅದಕ್ಕೆ ತಡೆಗೋಡೆ ನಿರ್ಮಿಸದೆ, ಕಾವಲುಗಾರರನ್ನು ನೇಮಿಸದೆ ಒಟ್ಟಾರೆ ಅದರ ಸುದ್ದಿಗೇ ಹೋಗದೆ ಪುರಸಭೆ ನಿರ್ಲಕ್ಷ್ಯಭಾವ ಮೆರೆದಿದೆ ಎನ್ನಲಾಗುತ್ತಿದೆ. ಇನ್ನಾದರೂ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅದನ್ನು ಸುಸ್ಥಿರಗೊಳಿಸಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.