ಹಾಸನ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದ್ದು, ಸಂವಿಧಾನ ನೀಡಿರುವ ಮೀಸಲಾತಿಯನ್ನು ರದ್ದುಗೊಳಿಸಲಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹5 ಕೋಟಿಯಿಂದ ಪ್ರಾರಂಭವಾಗಿ ಲಕ್ಷಾಂತರ ಕೋಟಿ ರೂಪಾಯಿ ಬಂಡವಾಳ ಹೊಂದಿರುವ ಎಲ್ಐಸಿ, ಬಿಇಎಂಎಲ್, ಬಿಪಿಸಿಎಲ್ ಸೇರಿದಂತೆ ಸರ್ಕಾರದ ಸಂಸ್ಥೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿರುವುದು ಯಾವ ದೇಶ ಪ್ರೇಮ ಎಂದು ಪ್ರಶ್ನಿಸಿದರು.
ದೇಶದ ಯುವ ಸಮೂಹ ಭಾವನಾತ್ಮಕ ವಿಚಾರದಿಂದ ಹೊಟ್ಟೆ ತುಂಬವುದಿಲ್ಲ ಎಂಬುದನ್ನು ಅರಿಯಬೇಕು. ಯುವಕರು, ವಿದ್ಯಾರ್ಥಿಗಳು ಇಂತಹ ವಿಚಾರಗಳ ವಿರುದ್ಧ ಬಲಿಷ್ಠ ಹೋರಾಟ ಕಟ್ಟಬೇಕು. ಇಲ್ಲವಾದರೆ ಭಾರತ ಬಲಿಷ್ಠ ರಾಷ್ಟ್ರವಾಗುವುದಿಲ್ಲ ಎಂದು ಹೇಳಿದರು.
ಈಚೆಗೆ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರು ಸ್ಥಳೀಯ ರೈಲ್ವೆ ಯೋಜನೆಗೆ ₹ 18,600 ಕೋಟಿ ಘೋಷಿಸಿದೆ. ಆದರೆ, ಅದಕ್ಕೆ ಮೀಸಲಿಟ್ಟ ಹಣ ₹ 1 ಕೋಟಿ ಮಾತ್ರ. 25 ಸಂಸದರು ಹಾಗೂ ರಾಜ್ಯ ಪ್ರತಿನಿಧಿಸುವ ಮೂವರು ಕೇಂದ್ರ ಸಚಿವರು ಕರ್ನಾಟಕದ ಸಮಸ್ಯೆಗಳ ಬಗ್ಗೆ ಇರುವರೆಗೂ ಮಾತನಾಡುತ್ತಿಲ್ಲ. ಪ್ರಧಾನಿ ಎದುರು ಮಾತನಾಡಲು ಹೆದರುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದಾದರೂ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದಾರಾ? ಇವರು ಕೇವಲ ವಾಟ್ಸ್ ಆ್ಯಪ್ ವಿಶ್ವವಿದ್ಯಾಲಯ ಸ್ಥಾಪಸಿದ್ದಾರೆ. ದೇಶದ ಶಿಕ್ಷಣಕ್ಕೆ ವಿದೇಶಿ ಹಣ ತರಲು ನಿರ್ಧರಿಸಿದ್ದಾರೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್ ಇದ್ದರು.