ಹಾಸನ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ರಾಜ್ಯದಲ್ಲಿ ಇಂದು ಬಂದ್ಗೆ ಕರೆ ನೀಡಿದ್ದರೂ, ನಮ್ಮಲ್ಲಿ ಒಗ್ಗಟ್ಟಿಲ್ಲ. ಇದು ನಮ್ಮ ರಾಜ್ಯದಲ್ಲಿರುವ ಸ್ಥಿತಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.
ಕಾವೇರಿ ನೀರು ಬಿಡದಂತೆ ಬೆಂಗಳೂರು ಬಂದ್ಗೆ ಸಂಬಂಧಿಸಿದಂತೆ ನಗರದ ಸಂಸದರ ನಿವಾಸದಲ್ಲಿ ಕರ್ನಾಟಕ ಬಂದ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾತನಾಡಿದ ಅವರು, ಕೆಲವರು ಇಂದು ಬಂದ್ ಮಾಡಿದ್ದಾರೆ. ಇನ್ನೂ ಕೆಲವರು ಶುಕ್ರವಾರ ಮಾಡ್ತಾರಂತೆ ಮತ್ತೆ ಕೆಲವರು ವಿಧಾನಸೌಧ ಮುತ್ತಿಗೆ ಹಾಕ್ತಾರಂತೆ. ಇದೇ ನಮ್ಮ ಕರ್ನಾಟಕ ಎಂದು ನಸುನಕ್ಕ ದೇವೇಗೌಡರು ನಮ್ಮಲ್ಲಿ ಒಗ್ಗಟ್ಟು ಇಲ್ಲ ಎಂದು ಪರೋಕ್ಷವಾಗಿ ಹೇಳಿ ಬೇಸರ ವ್ಯಕ್ತಪಡಿಸಿದರು.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವತ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ನೀರು ಎಷ್ಡಿದೆ ಎಂದು ವಿವರ ತಂದಿದ್ದಾರೆ. ಬಳಿಕ ಮತ್ತೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡು ರಾಜ್ಯಗಳ ಸ್ಥಿತಿ ಅಧ್ಯಯನ ಮಾಡಲು ತಜ್ಞರ ಸಮಿತಿ ಕಳಿಸಿ ಎಂದು ಆ ಪತ್ರದಲ್ಲಿ ಕೇಳಿದ್ದೇನೆ. ನಾನು ಬರೆದ ಪತ್ರದ ಸಾರಾಂಶದ ಬಗ್ಗೆ ಸಿಎಂ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಬೊಮ್ಮಾಯಿ ಸೇರಿದಂತೆ ಹಿರಿಯ ಮುಖಂಡರು ಎಲ್ಲರೂ ಸ್ವಾಗತ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಅಗತ್ಯ: ನಮ್ಮ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಬೇಕು. ಹಾಗಾಗಿ ಆ ಬೆಳೆ ಉಳಿಸೋಕೆ ಇವರಿಂದ ಆಗಲ್ಲ. ಮತ್ತೆ ಸಿಡಬ್ಲುಆರ್ಸಿ ತೀರ್ಪು ಬಗ್ಗೆ ಸರ್ಕಾರದ ನಿಲುವು ಇನ್ನೂ ಗೊತ್ತಿಲ್ಲ. ನಾನು ಹಿರಿಯ ರಾಜಕಾರಣಿ ಆಗಿ ನಮ್ಮಲ್ಲಿ ಐಕ್ಯತೆ ಇಲ್ಲ ಎಂದು ಹಲವಾರು ಬಾರಿ ಹೇಳಿದ್ದೇನೆ. ತಮಿಳುನಾಡಿನ ಪರಿಸ್ಥಿತಿ ಬೇರೆ ಇದೆ. ಈ ವಿಚಾರದಲ್ಲಿ ಸರ್ಕಾರದ ನಿಲುವು ಬಂದ ಮೇಲೆ ನಾವು ನಮ್ಮ ಪಕ್ಷ ಪ್ರತಿಕ್ರಿಯೆ ನೀಡುತ್ತೇವೆ ಎಂದು ತಿಳಿಸಿದರು.
ನಾನು ಬರೆದಿರುವ ಪತ್ರದಲ್ಲಿ ನಮ್ಮ ಹಾಲಿ ಬೆಳೆಗೆ 70 ಟಿಎಂಸಿ ನೀರು ಬೇಕೆಂದು ಸ್ಪಷ್ಟವಾಗಿ ಬರೆದಿದ್ದೇನೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರಶ್ನೆ ಇಲ್ಲ. ಮನಮೋಹನ್ ಸಿಂಗ್ ತೀರ್ಮಾನ ಮಾಡಿದ್ರಾ, ವಾಜಪೇಯಿ ತೀರ್ಮಾನ ಮಾಡಿದ್ರಾ! ಪ್ರಧಾನಿಯೊಬ್ಬರೇ ಈ ಬಗ್ಗೆ ತೀರ್ಮಾನ ಮಾಡಲು ಆಗಲ್ಲ ಎಂದು ದೇವೇಗೌಡರು ಹೇಳಿದ್ರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ನಾಳೆ ವಿವರವಾಗಿ ಮಾತನಾಡುತ್ತೇನೆ. ನಾನು ತಪ್ಪಿಸಿಕೊಂಡು ಕದ್ದು ಓಡಿ ಹೋಗೋ ಪ್ರಶ್ನೆ ಇಲ್ಲ. ನನ್ನ ಜೀವನದಲ್ಲಿ ಎಂದೂ ಮಿಸ್ ಲೀಡ್ ಮಾಡಿಲ್ಲ. ಹಿಂದೆ ಸಂಕಷ್ಟ ಬಂದಾಗ ಸಿದ್ದರಾಮಯ್ಯ ಹಾಗೂ ಸುಪ್ರೀಂ ಕೋರ್ಟ್ ವಕೀಲರು ನಮ್ಮ ಮನೆಗೆ ಬಂದಿದ್ದರು. ನಾನು ಉಪವಾಸ ಕೂತಿದ್ದಾಗ ಅನಂತಕುಮಾರ್ ಕೂಡ ಇದ್ದರು. ದೇವೇಗೌಡರು ಹೇಳಿದ್ದಕ್ಕೆ ಬದ್ಧ ಎಂದಿದ್ದರು. ಆಗ ಇದೇ ಪ್ರಧಾನಿ ಇದ್ದರೂ, ಸುಪ್ರೀಂಕೋರ್ಟ್ ತೀರ್ಪು ಸಿಡಬ್ಲು ಆರ್ ಸಿ ತೀರ್ಪನ್ನು ಎತ್ತಿ ಹಿಡಿದಿದೆ ಎಂದರು.
ಇದನ್ನೂ ಓದಿ:ಡಿಎಂಕೆ ಹಿತ ಕಾಯಲು ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ