ಹಾಸನ: ಕಾಫಿ ಡೇ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ ಸಿದ್ದಾರ್ಥ್ ನಿನ್ನೆಯಿಂದ ಕಾಣೆಯಾಗಿದ್ದು ಇದುವರೆಗೂ ಅವರ ಸುಳಿವು ದೊರೆತಿಲ್ಲ. ಅವರ ಬರೆದಿರುವ ಪತ್ರಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನಗಳು ಗಟ್ಟಿಯಾಗುತ್ತಿವೆ.
ಸಿದ್ದಾರ್ಥ್ ಹಾಸನದಲ್ಲಿಯೂ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ. ಬೇಲೂರಿನ ರಸ್ತೆಯಲ್ಲಿ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಎಂಬ ಕಾಫಿ ಬೀಜದ ಶುದ್ಧೀಕರಣ ಕಂಪನಿಯು ಹೊರದೇಶಕ್ಕೆ ಕಾಫಿ ರಫ್ತು ಮಾಡುತ್ತಿದೆ. ಅಲ್ಲದೇ ಜಿಲ್ಲೆಯ ಚನ್ನರಾಯಪಟ್ಟಣ ಬಳಿಯ ಉದಯಪುರ ಸಮೀಪ ಮತ್ತೊಂದು ಕಾಫಿ ಡೇ ನಡೆಸುತ್ತಿದ್ದರು.
ಹಾಸನದ ಈ ಎರಡೂ ಕಡೆ ಪ್ರತಿವರ್ಷ ಹತ್ತರಿಂದ ಹನ್ನೆರಡು ಕೋಟಿಯಷ್ಟು ವಹಿವಾಟು ನಡೆಯುತ್ತಿತ್ತು ಎಂಬುದು ಗಮನಾರ್ಹ ಸಂಗತಿ. ಕಳೆದ ವರ್ಷ ಐಟಿ ದಾಳಿ ವೇಳೆ ಅಧಿಕಾರಿಗಳು ಹಾಸನದಲ್ಲಿನ ಶಾಖಾ ಕಚೇರಿಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಈ ದಾಳಿ ಬಳಿಕ ಮಾನಸಿಕ ಒತ್ತಡದ ನಡುವೆ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದ ಕಂಪನಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿತ್ತು.
ನಿನ್ನೆಯಿಂದ ಸಿದ್ದಾರ್ಥ್ ಅವರು ಕಾಣೆಯಾಗಿದ್ದು ಹಾಸನದಲ್ಲಿರುವ ಅವರ ಶಾಖಾ ಕಚೇರಿಯ ನೌಕರರು ದುಃಖತಪ್ತರಾಗಿದ್ದಾರೆ. ಅಲ್ಲದೆ ನಿನ್ನೆ ಹಾಸನದ ಮೂಲಕವೇ ಅವರು ಸಕಲೇಶಪುರ ಮಾರ್ಗವಾಗಿ ಮಂಗಳೂರಿಗೆ ತೆರಳಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ ಕಾಫಿ ಡೇ ಗ್ಲೋಬಲ್ ಪ್ರವೇಟ್ ಲಿಮಿಟೆಡ್ನ ಕೆಲವು ನೌಕರರು ನಮ್ಮ ಮಾಲೀಕರು ಆದಷ್ಟು ಬೇಗ ಮರಳಿ ಬರಲಿ ಅನ್ನೋದೇ ನಮ್ಮ ಪ್ರಾರ್ಥನೆ ಎಂದು ನೋವಿನಿಂದ ನುಡಿದಿದ್ದಾರೆ.