ಹಾಸನ: ಮೈತ್ರಿ ಮಾಡ್ಕೊಂಡು ಅಖಾಡಕ್ಕಿಳಿದರೂ ಅಷ್ಟೇ, ಒಬ್ಬೊಬ್ಬರೇ ಅಖಾಡಕ್ಕೆ ಇಳಿದರೂ ಅಷ್ಟೇ. ಉಪ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲೋದು. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಚನ್ನರಾಯಪಟ್ಟಣದ ಹೊರವಲಯದಲ್ಲಿರುವ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಳುಗುವ ಹಡಗಿನಂತೆ. ಜೊತೆಗೆ ವಿಶ್ವಾಸವನ್ನು ಕಳೆದುಕೊಂಡು ಬಿರುಕುಬಿಟ್ಟ ಮನೆಯಂತಾಗಿವೆ. ಇದರ ಮಧ್ಯೆ ಮೈತ್ರಿ ಮಾಡಿಕೊಂಡು ಉಪ ಚುನಾವಣೆಯ ಅಖಾಡಕ್ಕೆ ನಿಂತರೂ ಜನ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದರು.
ಸಿದ್ದರಾಮಯ್ಯನವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕೋಮುವಾದಿ ಪಕ್ಷ ಅಂತಾ ಬೈಯ್ಯುತ್ತಿದ್ದರು. ಆ ಬೈಗುಳವೇ ಅವರ ಪಕ್ಷಕ್ಕೆ ಮುಳುವಾಯಿತು. ಅಲ್ಲದೆ ಕಾಂಗ್ರೆಸ್ ಸೋಲಿಗೆ ಅವರೇ ನೇರ ಹೊಣೆ ಎಂದು ಹೇಳಿದರು.
ಇನ್ನು, ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. 15 ಜನ ಅನರ್ಹ ಶಾಸಕರು ಅವರ ಕ್ಷೇತ್ರದಲ್ಲಿ ಯಾರನ್ನ ಸೂಚಿಸುತ್ತಾರೋ ಅವರನ್ನೇ ಪಕ್ಷದಿಂದ ಕಣಕ್ಕಿಳಿಸುತ್ತೇವೆ. ನಮಗೆ 8 ಸ್ಥಾನಗಳು ಕಡಿಮೆ ಇತ್ತು, ಹಾಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು 14 ತಿಂಗಳು ಅಧಿಕಾರವನ್ನು ಅನುಭವಿಸಿದರು. ಆದರೆ, ಈ ಉಪ ಚುನಾವಣೆಯಲ್ಲಿ ನಾವು ಸ್ಥಾನವನ್ನು ಗೆದ್ದು ಉಳಿದಿರುವ ಅವಧಿಯನ್ನು ಪೂರ್ಣಗೊಳಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.