ಸಕಲೇಶಪುರ(ಹಾಸನ): ಮೀನು ಹಿಡಿಯಲು ಹೋಗಿದ್ದ ವೇಳೆ ಅಪರಿಚಿತರು ಗುಂಡಿನ ದಾಳಿಗೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ ತಂಬಲಗೇರಿಯಲ್ಲಿ ಜ.9 ರಂದು ರಾತ್ರಿ ನಡೆದಿದೆ. ತಂಬಲಗೇರಿಯ ನವೀನ್ ಅಲಿಯಾಸ್ ಪಚ್ಚಿ (39) ಅಪರಿಚಿತರ ಗುಂಡಿಗೆ ಬಲಿಯಾಗಿರುವ ವ್ಯಕ್ತಿ. ನವೀನ್ ನಾಲ್ವರು ಸ್ನೇಹಿತರ ಜೊತೆಗೂಡಿ ಹೇಮಾವತಿ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದರು. ಇದೇ ವೇಳೆ ಅಪರಿಚಿತರು ಹಾರಿಸಿದ ಗುಂಡಿಗೆ ನವೀನ್ ಬಲಿಯಾಗಿದ್ದಾರೆ.
ನವೀನ್ ಸ್ನೇಹಿತರಾದ ದಯಾನಂದ ಹಾಗೂ ಪದ್ಮನಾಭ ಎಂಬುವರಿಗೂ ಗುಂಡು ತಗುಲಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗಿದ್ದ ಮತ್ತೋರ್ವ ಯುವಕ ರಾಜಾಚಾರಿ ಎಂಬುವವರಿಗೆ ಯಾವುದೇ ಅಪಾಯ ಸಂಭವಿಸದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹತ್ಯೆಗೀಡಾದ ಯುವಕ ನವೀನ್ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದರು. ಅಲ್ಲದೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದು, ಗ್ರಾಮಸ್ಥರ ಜೊತೆ ಸ್ನೇಹಜೀವಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಒಂದು ವರ್ಷದ ಹಿಂದೆ ನವೀನ್ ಅವರ ತಂದೆ ಮೃತಪಟ್ಟಿದ್ರು. ಇದೀಗ ನವೀನ್ ಸಾವನ್ನಪ್ಪಿರುವುದು ಕುಟುಂಬಕ್ಕೆ ಮತ್ತೊಂದು ಆಘಾತವಾಗಿದೆ. ಹೆಂಡತಿ ಹಾಗೂ ನಾಲ್ಕು ವರ್ಷದ ಪುಟ್ಟ ಮಗುವನ್ನು ನವೀನ್ ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾಡು ಪ್ರಾಣಿಗಳ ಬೇಟೆಯಾಡಲು ಬಂದವರು ನಡೆಸಿದ ದಾಳಿಯೋ ಅಥವಾ ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆಯಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಮುಖಂಡರ ಮೇಲೆ ದಾಳಿ: ಇನ್ನು, ಕಳೆದ ಮೂರು ದಿನಗಳ ಹಿಂದೆ ಗಡಿ ಜಿಲ್ಲೆಯಾದ ಬೆಳಗಾವಿಯ ಹಿಂಡಲಗಾ ಗ್ರಾಮದ ಮರಾಠಿ ಶಾಲೆಯ ಎದುರು ಶ್ರೀರಾಮ ಸೇನೆಯ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ದ್ವಿಚಕ್ರ ವಾಹನದಲ್ಲಿ ಬಂದಂತಹ ದುಷ್ಕರ್ಮಿಗಳು ಶ್ರೀರಾಮ ಸೇನೆ ಸಂಘಟನೆ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್, ಕಾರು ಚಾಲಕ ಮನೋಜ್ ದೇಸೂರಕರ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ಬಳಿಕ ದಾಳಿಯಿಂದ ಕುಸಿದುಬಿದ್ದಿದ್ದ ರವಿ ಕೋಕಿತ್ಕರ್, ಮನೋಜ್ ದೇಸೂರಕರ ಅವರನ್ನು ಸ್ಥಳೀಯರ ನೆರವಿನಿಂದ ಕೂಡಲೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಮೂವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ.. ಎಮ್ಮೆ ಕರು ಕೊಂದು ರಾಕ್ಷಸಿ ಕೃತ್ಯ.. ಆರೋಪ ತಳ್ಳಿಹಾಕಿದ ಜಮೀನು ಮಾಲೀಕ
ಬೆಳಗಾವಿ ನಗರದಿಂದ ಹಿಂಡಲಗಾ ಗ್ರಾಮಕ್ಕೆ ರವಿ ಅವರು ಅಂದು ಸಂಜೆ ಕಾರಲ್ಲಿ ತೆರಳುವಾಗ ಬೈಕ್ ಮೇಲೆ ಬಂದ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಕಾರಲ್ಲಿ ರವಿ ಸೇರಿ ನಾಲ್ವರು ಇದ್ದರು. ದಾಳಿಯಲ್ಲಿ ರವಿ ಮತ್ತು ಕಾರು ಡ್ರೈವ್ ಮಾಡುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ರವಿ ಗದ್ದಕ್ಕೆ ಮತ್ತು ಮನೋಜ್ ದೇಸೂರಕರ ಕೈಗೆ ಗುಂಡು ತಗುಲಿತ್ತು. ಫೈರಿಂಗ್ಗೆ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿಂತೆ ಈಗಾಗಲೇ ನಾಲ್ಕು ತಂಡಗಳನ್ನು ರಚಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದರು.
ಇದನ್ನೂ ಓದಿ: ಬೆಳಗಾವಿ - ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ