ಹಾಸನ/ಬೇಲೂರು: ಅಂತೂ - ಇಂತು ಹಳ್ಳಿ ಕದನ ಮುಕ್ತಾಯ ಹಂತ ತಲುಪಿದೆ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿಗಳು ಎಣಿಕೆ ಕಾರ್ಯ ಮುಗಿದಿದ್ದು, ಬೇಲೂರಿನಲ್ಲಿ ಕೆಲವು ಸ್ವಾರಸ್ಯಕರ ಘಟನೆಗಳು ಕೂಡ ನಡೆದಿದೆ.
37 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿರುವ ಬೇಲೂರು ತಾಲೂಕಿನಲ್ಲಿ ಒಟ್ಟು 423 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಈಗಾಗಲೇ 34 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. 387 ಸ್ಥಾನಗಳಿಗೆ ನಡೆದ ಚುನಾವಣೆಗೆ ಬೆಳಗ್ಗಿನಿಂದ ಇಲ್ಲಿಯ ತನಕ 35 ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಮುಗಿದಿದ್ದು, ಇನ್ನು ಕೇವಲ ಎರಡು ಗ್ರಾಮ ಪಂಚಾಯಿತಿಗಳ ಫಲಿತಾಂಶ ಹೊರ ಬೀಳಬೇಕಾಗಿದೆ.
ಈ ಬಾರಿ ಹಲವು ಮಂದಿ ಪದವೀಧರರು ಬೇಲೂರು ತಾಲೂಕಿನಲ್ಲಿ ಸ್ಪರ್ಧೆ ಮಾಡಿದ್ದು ಇದರಲ್ಲಿ, ಕೆಲವರು ಗೆಲುವಿನ ನಗೆ ಬೀರಿದರೆ ಮತ್ತೆ ಕೆಲವರು ಸೋಲನ್ನು ಅನುಭವಿಸಿದ್ದಾರೆ. ಬಂಟೆನಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ರಾಯಪುರ ಕ್ಷೇತ್ರದಿಂದ ಇಂಜಿನಿಯರ್ ಪದವಿ ಪಡೆದ ಯುವಕ ಸ್ಪರ್ಧೆ ಮಾಡಿದ್ದು, 255 ಮತಗಳನ್ನು ಪಡೆಯುವ ಮೂಲಕ ಪಿಹೆಚ್ಡಿ ಮಾಡಿದ ಅರೆಕಾಲಿಕ ಉಪನ್ಯಾಸಕ ಹಾಗೂ ಪ್ರತಿಸ್ಪರ್ಧಿ ಮಹೇಶ್ (75 ಮತ ಪಡೆದಿದ್ದಾರೆ) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರ ಜೊತೆಗೆ ಕೋಡಿಹಳ್ಳಿ ಕುಮಾರ್ ಎಂಬವರು ಕೇವಲ 40 ಮತಗಳಿಂದ ಸೋಲು ಕಂಡೆನಲ್ಲ ಎಂಬ ನೋವಿಗೆ ಮತಗಟ್ಟೆಯಲ್ಲಿ ಕಣ್ಣೀರುಹಾಕಿದ ಪ್ರಸಂಗವು ಕೂಡ ನಡೆಯಿತು.
ಮದಘಟ್ಟ ಗ್ರಾಮ ಪಂಚಾಯಿತಿಯ ಕಿರುಗಡಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸದಸ್ಯ ಸ್ಥಾನಕ್ಕೆ ಸ್ವಾಮಿ ಮತ್ತು ನಿರ್ವಾಣಯ್ಯ ಸ್ಪರ್ಧೆ ಮಾಡಿದ್ದರು. ಇವರಿಬ್ಬರಿಗೂ ಸಮನಾಂತರವಾಗಿ 175 ಮತಗಳು ಬಂದಿದ್ದರಿಂದ ಲಾಟರಿ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಸ್ವಾಮಿ ಗೆಲುವು ಸಾಧಿಸಿದರು.
ಇನ್ನೂ ರಾಜನಶಿರಿಯೂರು ಗ್ರಾಮ ಪಂಚಾಯಿತಿಯ ಗೌರಿಕೊಪ್ಪಲು ಕ್ಷೇತ್ರದ ಎಪಿಎಂಸಿ ಮಾಜಿ ಉಪಾಧ್ಯಕ್ಷ ನರಸಿಂಹೇಗೌಡ ಸತತ 4ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದರು. ಹಳೇಬೀಡು ಗ್ರಾಮ ಪಂಚಾಯಿತಿಯ ಶಿವಕುಮಾರ 4ನೇ ಬಾರಿಗೆ ಆಯ್ಕೆಯಾಗುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಮತ್ತು ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸನ್ಯಾಸಿಹಳ್ಳಿ ಗ್ರಾಮ ಪಂಚಾಯಿತಿಗೆ ಇಬ್ಬರು ಮಾಜಿ ಅಧ್ಯಕ್ಷರುಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಜೆಡಿಎಸ್ನ ಬೆಂಬಲಿತ ಅಭ್ಯರ್ಥಿ ಶಾಂತೇಗೌಡ ಗೌಡ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿತ ಸ್ಪರ್ಧೆ ಕೋಡಿ ಶಿವು ನಡುವಿನ ಸಮರದಲ್ಲಿ ಕೊನೆಗೂ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಶಾಂತೇಗೌಡನನ್ನ ಮಣಿಸುವಲ್ಲಿ ಕೊಡಿ ಶಿವು ಯಶಸ್ವಿಯಾಗಿದ್ದು, ಕೇವಲ ಮೂರು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ : ಅದೃಷ್ಟದ ಬಾಗಿಲು ತೆರೆದ ಅಂಚೆ ಮತ: ಅಚ್ಚರಿಯ ಗೆಲುವು ಅಂದ್ರೆ ಇದು!
ಇದರ ಜೊತೆಗೆ ಕಲ್ಲೇರಿ ಮತ್ತು ಅಗ್ಗೋಡ್ಲು ಕ್ಷೇತ್ರದ ಮಹೇಶ್ ಎಂಬುವರು 438 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರೆ ಕರಗಡ ಕ್ಷೇತ್ರದ ನಾರಾಯಣಪುರ ಗ್ರಾಮದ ಕುಮಾರ್ ಎಂಬವರು 590 ಮತಗಳನ್ನು ಪಡೆದಿರುವುದು ವಿಶೇಷವಾಗಿದೆ.
ಇನ್ನು ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯಿತಿಗೆ ಪತಿ - ಪತ್ನಿಯರು ಸ್ಪರ್ಧೆ ಮಾಡಿದ್ದು, ಮಮತಾ ತುಳಸಿದಾಸ್ 199 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಪತಿ ತುಳಸಿದಾಸ್ ಕೇವಲ ಒಂದೇ ಒಂದು ಮತದ ಅಂತರದಿಂದ ತನ್ನ ಪ್ರತಿಸ್ಪರ್ಧಿಯಾಗಿರುವ ಸಚಿನ್ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ.
ಮೊದಲಿಗೆ ತುಳಸಿದಾಸ್ ಮತ್ತು ಸಚಿನ್ಗೆ 164 ಸಮ ಮತಗಳು ಬಂದಿದ್ದರಿಂದ, ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ತಹಶೀಲ್ದಾರ್ ಮುಂದಾಗಿದ್ದು ಇದಕ್ಕೆ ಒಪ್ಪದ ಅಭ್ಯರ್ಥಿಗಳು ಮರುಮತದಾನಕ್ಕೆ ಒತ್ತಡ ಹೇರಿದರು. ಮರುಮತದಾನ ಮಾಡಿದ ಬಳಿಕ ತುಳಸಿದಾಸ್ ಕೆ 164 ಮತಗಳು ಬಂದರೆ ಪ್ರತಿಸ್ಪರ್ಧಿ ಸಚಿನ್ಗೆ 165 ಮತಗಳು ಬಂದಿದ್ದರಿಂದ ಕೇವಲ ಒಂದೇ ಒಂದು ಮತದ ಅಂತರದಿಂದ ಸೋಲು ಕಂಡರು.