ಹಾಸನ: ನಿನ್ನೆ ತಾನೆ ಚಿರತೆಯೊಂದು ರೈತನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ಅದರ ಬೆನ್ನಲ್ಲೇ ಈಗ ಕರಡಿ ವಯೋವೃದ್ದ ರೈತನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಅರಸೀಕೆರೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಶಿವಣ್ಣ (60) ಎಂಬ ರೈತ ಕರಡಿ ದಾಳಿಯಿಂದ ಗಾಯಗೊಂಡವರಾಗಿದ್ದಾರೆ.
ಅರಸೀಕೆರೆ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಶಿವಣ್ಣ ಎಂದಿನಂತೆ ಶನಿವಾರ ಜಮೀನಿಗೆ ಕೆಲಸಕ್ಕೆ ಹೋಗಿದ್ದರು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಂದಿನಿಂದ ಬಂದ ಕರಡಿ ಏಕಾಎಕಿ ಆತನ ಮೇಲೆ ದಾಳಿ ನಡೆಸಿದೆ. ಕರಡಿ ದಾಳಿಗೆ ಪ್ರತಿಯಾಗಿ ದಾಳಿ ನಡೆಸಲು ಸಾಧ್ಯವಾಗದ ಶಿವಣ್ಣ ಕಿರುಚಾಟ ಮಾಡಿದ್ದಾನೆ. ಕಿರುಚಾಟದ ಶಬ್ದ ಕೇಳಿದ ಅಕ್ಕ ಪಕ್ಕದ ಜಮೀನಿನ ರೈತರು ಬಂದು ಕರಡಿ ಓಡಿಸುವ ಪ್ರಯತ್ನ ಮಾಡಿದ್ದು ನಂತರ ರೈತನ ಜೀವ ಉಳಿಸಿದ್ದಾರೆ. ಇನ್ನು ಗಾಯಗೊಂಡಿರುವ ಶಿವಣ್ಣನನ್ನು ಪ್ರಥಮ ಚಿಕಿತ್ಸೆಗಾಗಿ ಅರ್ಸಿಕೆರೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ,ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹಾಸನದ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಣಿ ಮಾನವ ಸಂಘರ್ಷ ಹೆಚ್ಚಳ, ಆತಂಕ: ದಿನದಿಂದ ದಿನಕ್ಕೆ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಅರಸೀಕೆರೆ ಮತ್ತು ಬೇಲೂರು ಭಾಗದಲ್ಲಿ ಆನೆಯಾವಳಿ ಉಪಟಳ ಹೆಚ್ಚಾಗಿದೆ. ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಬೆಳೆ ನಾಶಪಡಿಸುತ್ತಿವೆ. ಹೊಳೆನರಸೀಪುರ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಭಾಗಗಳಲ್ಲಿ ಚಿರತೆ ದಾಳಿಗಳು ಹೆಚ್ಚಾಗುತ್ತಿವೆ. ಅರಸೀಕೆರೆ ತಾಲೂಕಿನಲ್ಲಿ ಶನಿವಾರ ಕರಡಿ ದಾಳಿ ನಡೆಸಿರುವುದು ರೈತರಲ್ಲಿ ಆತಂಕ ಹೆಚ್ಚು ಮಾಡಿದ್ದು, ಜಮೀನಿನ ಕಡೆ ಹೋಗಲು ಭಯಪಡುವಂತಾಗಿದೆ.
ಅರಣ್ಯ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಕಾಡುಪ್ರಾಣಿಗಳನ್ನ ಹಿಡಿಯುವ ಕೆಲಸ ಮಾಡಬೇಕು. ಅವುಗಳನ್ನು ಬೇರೆ ಕಡೆ ಅರಣ್ಯಗಳಿಗೆ ಸ್ಥಳಾಂತರಿಸಿ ಬದುಕಲು ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನಿನ್ನೆ ಚಿರತೆ ದಾಳಿ ಇವತ್ತು ಕರಡಿ ದಾಳಿಗೆ ಗ್ರಾಮೀಣ ಭಾಗದ ರೈತರು ಆತಂಕಗೊಂಡಿದ್ದಾರೆ.
ಚಿರತೆ ಜೀವಂತ ಹಿಡಿದು ಸಾಹಸ ಮೆರೆದ ಯುವರೈತ: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಚಿರತೆಯೊಂದು ಯುವ ರೈತನ ಮೇಲೆ ದಾಳಿ ಮಾಡಿದೆ. ಜೀವ ಉಳಿಸಿಕೊಳ್ಳಲು ಭಯಪಡದೇ ಹೋರಾಡಿ ಚಿರತೆಯನ್ನು ಜೀವಂತವಾಗಿ ಹಿಡಿದು ಬೈಕ್‌ಗೆ ಕಟ್ಟಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿ ಮುತ್ತು ಎಂಬ ಯುವರೈತ ಸಾಹಸ ಮೆರೆದಿದ್ದಾನೆ.
ತನ್ನ ಜಮೀನಿನಲ್ಲಿ ಬೆಳೆದಿದ್ದ ಶುಂಠಿಗೆ ಔಷಧ ಸಿಂಪಡಿಸಲು ಹೋದ ಸಂದರ್ಭದಲ್ಲಿ ಊರಿನ ಕೆಲವು ವ್ಯಕ್ತಿಗಳು ಚಿರತೆ ಬಂದಿದೆ ಮಾಹಿತಿ ನೀಡಲಾಗಿತ್ತು. ಈ ಮಾಹಿತಿ ಗೊತ್ತಿದ್ದೇ ಧೈರ್ಯದಿಂದ ಜಮೀನಿಗೆ ತೆರಳಿದ್ದ. ಮುತ್ತು ಜಮೀನಿಗೆ ಹೊರಟಿದ್ದ ವೇಳೆ ಮರದ ಮೇಲೆ ಕುಳಿತಿದ್ದ ಚಿರತೆ ಆತನ ಮೇಲೆ ಎರಗಿದೆ. ಈ ಸಂದರ್ಭದಲ್ಲಿ ಚಿರತೆಯ ಜತೆ ಹೋರಾಟ ಮಾಡಿ ಚಿರತೆಯ ಕಾಲುಗಳನ್ನು ಕಟ್ಟಿ ತನ್ನ ಜಮೀನಿನಿಂದ ಬಾಗಿವಾಳ ಗ್ರಾಮಕ್ಕೆ ಬೈಕ್ನಲ್ಲಿ ತಂದಿದ್ದಾನೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡಿ ವಶಕ್ಕೆ ಪಡೆದಿದ್ದಾರೆ. ನಂತರ ಗಾಯಾಳು ಯುವ ರೈತ ಮುತ್ತುನನ್ನು ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂಓದಿ:Bear attack: ಕರಡಿಯೊಂದಿಗೆ ಕಾದಾಡಿ ಪವಾಡ ಸದೃಶ್ಯ ರೀತಿ ಬದುಕುಳಿದ 72ರ ವೃದ್ಧ