ಹೊಳೆನರಸೀಪುರ(ಹಾಸನ): ಇವರ ಸ್ವಾರ್ಥಕ್ಕಾಗಿ ನನ್ನನ್ನು ಬಲಿ ಕೊಡೋಕ್ಕೆ ಹೊರಟಿಲ್ಲ. ನಮ್ಮ ಜನರನ್ನು ಮತ್ತು ನಮ್ಮ ರೈತರನ್ನು ಬಲಿ ಕೊಡೋಕೆ ಇವರು(ಹೆಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ) ಹೊರಟಿದ್ದಾರೆ. ನಾನು ಕೆಟ್ಟವನು, ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ದರು. ಆದರೆ ನಾನು ಅವರ ಹಾಗೆ ಮೈಕ್ ಹಾಕಿಕೊಂಡು ಮನೆ ಮುಂದೆ ಗಲಾಟೆ ಮಾಡಕ್ಕಾಗುತ್ತಾ ಎನ್ನುವ ಮೂಲಕ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಅವರ ಪುತ್ರರ ವಿರುದ್ಧ ಶಾಸಕ ಎ ಟಿ ರಾಮಸ್ವಾಮಿ ಕಿಡಿಕಾರಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಹೊಳೆನರಸೀಪುರ ತಾಲೂಕಿನ ಮೈಸೂರು ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ಹಾಕಿದ ಅವರು, ಇಡೀ ರಾಜ್ಯಕ್ಕೆ ಎ ಟಿ ರಾಮಸ್ವಾಮಿ ಎಂತಹ ಮನುಷ್ಯ ಎಂಬುದು ಗೊತ್ತಿದೆ. ಅವತ್ತು ನಾನು ಇಡೀ ರಾತ್ರಿ ನಿದ್ದೆ ಮಾಡಿಲ್ಲ, ನನ್ನ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ರೆಡಿ ಆಗಿತ್ತು. ಆದರೆ ಬೆಳಗ್ಗೆ ಕಾರ್ಯಕ್ರಮವೇ ರದ್ದಾಗಿದೆ ಅಂತ ಹೇಳಿ ಮೆಸೇಜ್ ಹಾಕ್ತಾರೆ. ಅಂದರೆ ಅಂತಹ ದೇವೇಗೌಡರನ್ನೇ ಉತ್ಸವ ಮೂರ್ತಿಯಾಗಿ ಮಾಡಿರೋ ಅವರು ನನ್ನನ್ನ ಬಿಡ್ತಾರಾ? ನನ್ನ ಕಾರ್ಯಕ್ರಮಕ್ಕೆ ಹೋಗಬಾರದು ಅಂತ ಅವರ ಕುಟುಂಬದವರೇ ತಡೆದಿದ್ದರು ಎಂದು ಆರೋಪಿಸಿದರು.
ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ದರು: ಜ.22ರಂದು ಕಾರ್ಯಕ್ರಮ ಆಯೋಜನೆ ಮಾಡಿದ್ದೆವು, ಕಾರ್ಯಕ್ರಮಕ್ಕೆ ಹೆಚ್ ಡಿ ದೇವೇಗೌಡರನ್ನು ಆಹ್ವಾನ ಮಾಡಲು ಬೆಂಗಳೂರಿಗೆ ಹೋಗಿದ್ದೆ. ನಂತರ ಅವರಿಗೆ ಮೊದಲು ಆರೋಗ್ಯ ಕಾಪಾಡಿಕೊಳ್ಳಿ. ಕಾರ್ಯಕ್ರಮ ಇನ್ನೊಂದು ದಿನ ಮಾಡೋಣ ಅಂತ ಹೇಳಿದೆ. ಆದರೆ ಅವರು ರಾಜಕೀಯ ಮಾತಾಡೋಕೆ ಶುರು ಮಾಡಿದ್ದರು. ನನ್ನ ಕೈ ಹಿಡ್ಕೊಂಡು ನಿನಗೆ ಏನು ಕಿರುಕುಳ ಕೊಡುತ್ತಿದ್ದಾರೆ, ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು. ನಾನು ಬದುಕಿರೋ ತನಕ ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ದರು ಎಂದರು.
ನಂತರ ಮಾತನಾಡಿ, ಅಂತಹ ಮುತ್ಸದ್ಧಿ ರಾಜಕಾರಣಿಯನ್ನೇ ಮೂಲೆಗುಂಪು ಮಾಡಿದ್ದು ನನಗೆ ತುಂಬಾ ನೋವಾಗಿದೆ. ಅಂತಹ ಮಹಾನ್ ನಾಯಕನನ್ನೇ ಜಿಲ್ಲೆಯಿಂದ ಹೊರದಬ್ಬಿದವರು ನನ್ನನ್ನು ಬಿಡ್ತಾರಾ. ಹಾಸನದ ಚನ್ನಪಟ್ಟಣದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ಪೂರ್ವಭಾವಿ ಸಭೆ ನಡೆದಿತ್ತು. ಎಲ್ಲರೂ ಪ್ರಜ್ವಲ್ ರೇವಣ್ಣ ಹೆಸರು ಹೇಳಿದರು, ಆದರೆ ನಾನು ಹೇಳಲಿಲ್ಲ. ಅಲ್ಲಿಂದಲೇ ನನ್ನ ಮೇಲೆ ಹಗೆತನ ಶುರುವಾಯಿತು. ದೇವೇಗೌಡರು ನಿವೃತ್ತಿ ಆಕ್ತೀನಿ ಅಂದಿದ್ದರೆ, ನಾನು ಹೆಸರು ಹೇಳುತ್ತಿದ್ದೆ. ಆದರೆ ಅವರು ನಿಂತ್ಕೊಳ್ತೀನಿ ಅಂತಿರುವಾಗ ಜಿಲ್ಲೆಯಿಂದ ಅಷ್ಟೇ ಅಲ್ಲಾ, ಮನೆಯಿಂದಾನು ಹೊರದಬ್ಬಿದರು. ಇವೆಲ್ಲ ಪೂರ್ವ ನಿರ್ಧರಿತ ತೀರ್ಮಾನಗಳು ಎಂದು ಶಾಸಕರು ಆರೋಪಿದರು.
ಅನ್ಯಾಯಗಳಾದಾಗ ಬೆಂಕಿ ಉಂಡೆಗಳಾಗಬೇಕು: ಸಂಸದ ಪ್ರಜ್ವಲ್ ವಿರುದ್ಧ ಆಸ್ತಿ ಘೋಷಣೆ ವಿಚಾರವಾಗಿ ನ್ಯಾಯಾಲಯದಲ್ಲಿ ವಾದ ವಿವಾದ ನಡೆಯುತ್ತಿದೆ. ತೀವ್ರತರವಾದ ವಿಚಾರಣೆ ನಡೆಯುತ್ತಿರುವುದರಿಂದ ಶಿಕ್ಷೆ ಆಗುತ್ತದೆ ಎಂಬ ವಿಚಾರ ಗೊತ್ತಾಗಿದೆ. ಹಾಗಾಗಿ ಕೇಸ್ ಅನ್ನು ರಾಜಿ ಮಾಡ್ಕೊಳಕ್ಕಾಗಿ ಸ್ವಾರ್ಥದಿಂದ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು. ಯಾಕಂದರೆ ಆ ಮನುಷ್ಯನಿಗೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಕೊಡಲ್ಲ ಅಂತ ಗೊತ್ತು. ಹಾಗಾಗಿ ಇವರ ಸ್ವಾರ್ಥಕ್ಕಾಗಿ ಒಬ್ಬ ವ್ಯಕ್ತಿಯನ್ನು ಮಾತ್ರ ಬಲಿ ಕೊಡಲಿಕ್ಕೆ ಹೊರಟಿಲ್ಲ. ಬದಲಿಗೆ ಇಡೀ ನನ್ನ ಕ್ಷೇತ್ರದ ಜನರನ್ನು ಮತ್ತು ನನ್ನ ರೈತಾಪಿ ವರ್ಗದವರನ್ನು ಹಾಗೂ ಮತದಾರರನ್ನು ಬಲಿ ಕೊಡಲು ಹೊರಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಇಂತಹ ಅನ್ಯಾಯಗಳಾದಾಗ ಬೆಂಕಿ ಉಂಡೆಗಳಾಗಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ:ಮುಂದಿನ ಚುನಾವಣೆಗಳಲ್ಲಿ ಮಂಡ್ಯದಿಂದ ಸ್ಪರ್ಧೆ ಇಲ್ಲ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ