ಆಲೂರು: ಕರ್ತವ್ಯನಿರತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಪಾಳ್ಯ ಹೋಬಳಿ ಮಡಬಲು ಗ್ರಾಮದಲ್ಲಿ ನಡೆದಿದೆ.
ಮಡಬಲು ಗ್ರಾಮ ಪಂಚಾಯತ್ ಕಚೇರಿಯ PDO ಮಹಮದ್ ಎಂಬುವವರ ಮೇಲೆ ಅದೇ ಗ್ರಾಮದ ಪುಟ್ಟರಾಜು ಹಲ್ಲೆ ಮಾಡಿದ್ದಾನೆ. ಪಿಡಿಒ ಪ್ರಾಣಾಪಾಯದಿಂದ ಪಾರಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಪುಟ್ಟರಾಜು ಆ. 31ರಂದು ಕಚೇರಿಗೆ ಬಂದು ನನಗೆ ಮೆಣಸು ಬೆಳೆಯಲು ಬಳ್ಳಿ ಏಕೆ ಕೊಡಲಿಲ್ಲ ಎಂದು ಪಿಡಿಒಗೆ ಪ್ರಶ್ನಿಸಿದ್ದಾನೆ. ಈ ಬಾರಿ ಯೋಜನೆಯಲ್ಲಿ ತಮ್ಮ ಹೆಸರಿಲ್ಲ. ಮುಂದಿನ ಬಾರಿ ಕೊಡುವುದಾಗಿ ಪಿಡಿಒ ಹೇಳಿದ್ದಾರೆ.
ಇದರಿಂದ ಕೋಪಗೊಂಡಿದ್ದ ಪುಟ್ಟರಾಜ ನಾಳೆ ಬಂದು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದ. ಮಾರನೇ ದಿನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ಮೇಲೆ ಪೊಲೀಸ್ ದೂರು ಕೊಡುತ್ತೀಯಾ ಎಂದು ಏಕಾಏಕಿ ಮಚ್ಚು ಬೀಸಿದಾಗ ಪಿಡಿಒ ಎಡ ಬುಜಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅಲ್ಲದೆ ಎರಡು ಕಂಪ್ಯೂಟರ್ಗಳು ಪುಡಿಯಾಗಿವೆ ಎನ್ನಲಾಗಿದೆ. ಈ ಸಂಬಂಧ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.