ಹಾಸನ: ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಮಾಸಿಕ ವೇತನ ಹಾಗೂ ಆರೋಗ್ಯ ರಕ್ಷಣಾ ಸಾಮಾಗ್ರಿ ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೋತ್ಸಾಹಧನ ಮತ್ತು ಗೌರವಧನ ಎರಡು ರೀತಿಯ ಮಿಶ್ರಣದ ವಿಚಿತ್ರ ವೇತನ ಮಾದರಿಯಲ್ಲಿ ಹಣ ಪಾವತಿಸಲಾಗುತ್ತಿದೆ. ಅದರಂತೆ ರಾಜ್ಯದಲ್ಲಿ ಪ್ರತೀ ಆಶಾ ಕಾರ್ಯಕರ್ತೆಗೆ ಮಾಸಿಕ ಗೌರವಧನ ರೂ. 4000 ಮತ್ತು ಎಂಟು ರುಟೀನ್ ವರ್ಕ್ ಬಿಡಿ ಬಿಡಿಯಾಗಿ ಸೇರಿಸಿ 2 ಸಾವಿರ ರೂ. ಮತ್ತು ವಿವಿಧ ಚಟುವಟಿಕೆ ಆಧಾರಿತ ಕೆಲಸದ ಹಣ ಒಟ್ಟಿಗೆ ಸೇರಿಸಿ 2ರಿಂದ 3 ಸಾವಿರ ರೂ. ನೀಡಲಾಗುತ್ತಿದೆ. ಇದು ಬಹುದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಪ್ರೋತ್ಸಾಹಧನ ಮತ್ತು ಗೌರವಧನ ಸೇರಿ ನಿಶ್ಚಿತ ಗೌರವಧನ ರೂ. 12000 ಪ್ರತಿ ತಿಂಗಳು ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿ ದಿನವೂ ಜನರೊಂದಿಗೆ ಬೆರೆತು ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು ಹೆಚ್ಚು ಸೋಂಕಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೊರೊನಾ ಸೋಂಕು ನಿಯಂತ್ರಿಸಲು ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯವನ್ನು ರಕ್ಷಿಸುವ ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಘೋಷಣೆ ಮಾಡಿರುವ ರೂ. 2000 ಮತ್ತು ರೂ. 3000 ಪ್ಯಾಕೇಜ್ ಸಂಪೂರ್ಣ ಹಣ ಈ ಕೂಡಲೇ ಕಾರ್ಯಕರ್ತೆಯರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದರು.