ಸಕಲೇಶಪುರ (ಹಾಸನ): ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕವನ್ ಗೌಡ ಗೆಲುವು ಸಾಧಿಸಿದ್ದಾರೆ.
ಇಂದು ನಡೆದ ಚುನಾವಣೆಯೆಲ್ಲಿ ಜೆಡಿಎಸ್ನ ಕವನ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾನಹಳ್ಳಿ ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಹೊರ ಬಂದ ಫಲಿತಾಂಶದಲ್ಲಿ ಜೆಡಿಎಸ್ ಅಭ್ಯರ್ಥಿ ಕವನ್ ಗೌಡ 11 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ ಕ್ಯಾನಹಳ್ಳಿ ಸುರೇಶ್ ಕೇವಲ 4 ಮತಗಳನ್ನು ಪಡೆಯುವಲ್ಲಿ ಸಫಲರಾದರು.
ಒಟ್ಟು 15 ಸದಸ್ಯ ಬಲದ ಎಪಿಎಂಸಿಯಲ್ಲಿ ಜೆಡಿಎಸ್ನ 7 ಸದಸ್ಯರು, ಕಾಂಗ್ರೆಸ್ನ 4 ಸದಸ್ಯರು, ಮೂವರು ನಾಮ ನಿರ್ದೇಶಿತ ಸದಸ್ಯರು ಹಾಗೂ 4 ಜನ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್ ಸದಸ್ಯರು ಜೆಡಿಎಸ್ಗೆ ಬೆಂಬಲ ನೀಡಿದ್ದರಿಂದ ಕವನ್ ಗೌಡ ಭರ್ಜರಿಯಾಗಿ ಗೆಲುವು ಸಾಧಿಸಿದರು.
ಉಪಾಧ್ಯಕ್ಷರಾಗಿ ಚಂದ್ರಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಮಂಜುನಾಥ್ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ಇವತ್ತು ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದ್ದು ಕಾರ್ಪೋರೆಟ್ಗಳ ಪರ ಕೇಂದ್ರ ಸರ್ಕಾರವಿರುವುದರಿಂದ ರೈತರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಯನ್ನು ದೂರವಿಡುವ ಉದ್ದೇಶದಿಂದ ಒಗ್ಗೂಡಿದೆ ಎಂದರು.
ನೂತನವಾಗಿ ಆಯ್ಕೆಯಾದ ಎಪಿಎಂಸಿ ಅಧ್ಯಕ್ಷ ಕವನ್ ಗೌಡ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಕೆ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಬೈರಮುಡಿ ಚಂದ್ರುರವರ ನಡುವೆ ಮಾತುಕತೆ ನಡೆದ ಪರಿಣಾಮ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದ್ದೇವೆ. ಎಲ್ಲರ ಬೆಂಬಲದಿಂದ ಎಪಿಎಂಸಿಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ರೈತರ ಹಿತವನ್ನು ಕಾಪಾಡುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡ ಬೈರಮುಡಿ ಚಂದ್ರು, ಜಿ.ಪಂ ಸದಸ್ಯರುಗಳಾದ ಸುಪ್ರದೀಪ್ತ ಯಜಮಾನ್, ಉಜ್ಮಾರುಜ್ವಿ, ಜೆಡಿಎಸ್ ಮುಖಂಡ ಸಚ್ಚಿನ್ ಪ್ರಸಾದ್ ಸೇರಿದಂತೆ ಎಲ್ಲಾ ಎಪಿಎಂಸಿ ಸದಸ್ಯರು ಹಾಜರಿದ್ದರು.