ಹಾಸನ: ಇಷ್ಟು ದಿನ ಕೊರೊನಾ ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದ ರೈತರು, ಇದೀಗ ಅಂಫಾನ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಮತ್ತು ಬಿರುಗಾಳಿಗೆ ಜಿಲ್ಲೆಯ ಕೆಲವು ತಾಲೂಕುಗಳು ತತ್ತರಿಸಿವೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು, ಗುಲಸಿಂದ ಮತ್ತು ಗೌರಿಕೊಪ್ಪಲು ಗ್ರಾಮದಲ್ಲಿ ಸುಮಾರು 70ಕ್ಕೂ ಹೆಚ್ಚು ತೆಂಗಿನಮರಗಳು ಧರೆಗುರುಳಿವೆ. ಗೌರಿ ಕೊಪ್ಪಲಿನ ಲಕ್ಷ್ಮಮ್ಮ ಎಂಬುವರ ಮನೆ ಕುಸಿದು ಬಿದ್ದಿದೆ.
ದಿಂಡಗೂರು ಗ್ರಾಮದ ನಾಗರಾಜು ಎಂಬುವರ ಮನೆ ಮೇಲೆ ತೆಂಗಿನಮರ ಬಿದ್ದು ಮೇಲ್ಛಾವಣಿ ಸಂಪೂರ್ಣ ಹಾಳಾಗಿದೆ. ರೈತ ಸತೀಶ್ ಎಂಬುವರ ಮೂರು ತೆಂಗಿನಮರಗಳು ನೆಲಕಚ್ಚಿವೆ. ಜೊತೆಗೆ ಚನ್ನರಾಯಪಟ್ಟಣದಲ್ಲಿ ಹಲವೆಡೆ ಬೆಳೆಯಲಾಗಿದ್ದ ಬಾಳೆ ತೋಟಗಳು ಬಿರುಗಾಳಿಗೆ ಹಾನಿಯಾಗಿವೆ. ಹೀಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ತೋಟಗಳು ನಾಶವಾಗಿವೆ.
ಹಲವು ಮನೆಗಳ ಮೇಲೆ ತೆಂಗಿನ ಮರ ಬಿದ್ದರೆ, ಬಿರುಗಾಳಿಗೆ ಕೆಲವೆಡೆ ಮನೆಗಳ ಹೆಂಚುಗಳು, ಶೀಟುಗಳು ಹಾರಿ ಹೋಗಿವೆ. ಕೆಲವೆಡೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರೈತರ ಮನೆಯ ಅಟ್ಟದಲ್ಲಿ ಹಾಕಲಾಗಿದ್ದ ತೆಂಗಿನಕಾಯಿ ಕೊಬ್ಬರಿಗೆ ನೀರು ಸೋರಿ ಲಕ್ಷಾಂತರ ಮೌಲ್ಯದ ಕೊಬ್ಬರಿ ನೀರುಪಾಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ನಷ್ಟಕ್ಕೆ ಒಳಗಾದ ರೈತರು ಒತ್ತಾಯಿಸಿದ್ದಾರೆ.