ಅರಕಲಗೂಡು: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಸೋಂಪುರ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕ ತೆರವುಗೊಳಿಸಿ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಗ್ರಾಮದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ನೂರಕ್ಕೂ ಹೆಚ್ಚು ದಲಿತ ಸಮುದಾಯದ ಕುಟುಂಬಗಳು ನೆಲೆಸಿದ್ದು, ಕಳೆದ 25 ವರ್ಷಗಳ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಹೆಸರಿನಲ್ಲಿ ನಾಮಫಲಕ ಸ್ಥಾಪಿಸಲಾಗಿತ್ತು. ಇದೀಗ ಅದರ ಪಕ್ಕದ ಮನೆಯವರು ಜಾಗ ನಮಗೆ ಸೇರಿದ್ದು ಎಂದು ಹೊಸದಾಗಿ ಮನೆ ಕಟ್ಟುವುದಾಗಿ ಹೇಳಿ ನಾಮಫಲಕ ಕಿತ್ತು ಹಾಕಿದ್ದಾರೆ. ಇದರಿಂದಾಗಿ ಅನವಶ್ಯಕವಾಗಿ ಊರಿನಲ್ಲಿ ಕಲಹ ಹಬ್ಬಿಸಲಾಗುತ್ತಿದೆ ಅಂತ ಗ್ರಾಮದ ಯುವಕರು ದೂರಿದ್ದಾರೆ.
ಈ ಕುರಿತು ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ ಎಂದಿದ್ದಾರೆ. ನಾಮಫಲಕ ಕಿತ್ತು ಹಾಕಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ನಾಮಫಲಕ ಜಾಗದ ಸಂಬಂಧ ದಾಖಲಾತಿಗಳನ್ನು ಒದಗಿಸಲು ಮಾಲೀಕರಿಗೆ ಸೂಚಿಸಲಾಗಿದೆ ಎಂದು ಲಕ್ಕೂರು ಗ್ರಾ.ಪಂ. ಪಿಡಿಓ ನಾಗರಾಜು ತಿಳಿಸಿದ್ದಾರೆ.