ಹಾಸನ: ಲಾಕ್ಡೌನ್ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ 129 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ದೇವರು ನೆನಪಿಸಿಕೊಳ್ಳುವಂತೆ ಅಂಬೇಡ್ಕರ್ ರವರನ್ನು ನೆನಪಿಸಿಕೊಳ್ಳಬೇಕು. ದೇಶಕ್ಕೆ ಸಂವಿಧಾನವನ್ನು ನೀಡಿದ್ದು, ಯಾವುದೇ ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮಕ್ಕೂ ಸಮಾನ ಸಂವಿಧಾನ ನೀಡಿರುವುದರಿಂದ ನಾವುಗಳು ಇಂದು ಶಾಂತಿಯುತವಾಗಿ ಬದುಕು ಸಾಗಿಸುತ್ತಿದ್ದೇವೆ ಎಂದರು.
ಅನೇಕ ರಾಷ್ಟ್ರಗಳಲ್ಲಿ ಸಂವಿಧಾನವೇ ಕುಸಿದು ಹೋಗಿ ಆಡಳಿತ ಯಂತ್ರ ನೆಲ ಕಚ್ಚಿದೆ. ಇಂತಹ ಕಠಿಣ ಸಂದರ್ಭದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವು ಮಾದರಿಯಾಗಿದೆ. ಜಾತಿ ಪದ್ಧತಿ ನಿರ್ಮೂಲನೆಗಾಗಿ ಅಂಬೇಡ್ಕರ್ ರವರು ಹೋರಾಟವನ್ನು ನಡೆಸಿದವರು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾತನಾಡಿ, ಕನಸು ಮತ್ತು ಆಶಯಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಈಡೇರಿಸುವ ಕೆಲಸ ಮಾಡಬೇಕು. ಇಂದು ನಾವುಗಳು ಒಂದು ಸಂಕಷ್ಟದಲ್ಲಿ ಸಿಲುಕಿದ್ದು, ಇದರಿಂದ ಹೊರ ಬರಲು ಅಂಬೇಡ್ಕರ್ ಹಾಕಿಕೊಟ್ಟ ರೂಪುರೇಷ ಮತ್ತು ಮಾರ್ಗದಲ್ಲಿ ನಡೆದು ಕೊರೊನಾ ಎಂಬ ಯುದ್ಧದಲ್ಲಿ ಗೆಲುವು ಸಾಧಿಸೋಣ ಎಂದು ಕರೆ ನೀಡಿಸದರು.