ಹಾಸನ : ನೋಡೋದಕ್ಕೆ ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ತಮ್ಮ ಹುಡುಗನಿಗೆ ಪಕ್ಕದ ಮನೆಯ ಹುಡುಗಿಯನ್ನು ಮದುವೆ ಮಾಡಿಸಿದ ನಗರದ ಕುಟುಂಬವೊಂದು ಇಕ್ಕಟ್ಟಿಗೆ ಸಿಲುಕಿದೆ. ಮದುವೆಯಾದ ಬಳಿಕ, ತಮ್ಮ ಹುಡುಗ ಅಪ್ರಾಪ್ತೆಯನ್ನು ವರಿಸಿದ್ದಾನೆ ಎಂಬುವುದು ಹುಡುಗನ ಮನೆಯವರಿಗೆ ಗೊತ್ತಾಗಿದ್ದು, ವಯಸ್ಸು ಮರೆಮಾಚಿ ಮದುವೆ ಮಾಡಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ, ಹುಡುಗಿಯ ಮನೆಯವರು ತಮ್ಮ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದ ನಿವಾಸಿಯ ಯುವಕ ದುಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಮನೆಯವರ ನಿಶ್ಚಯದಂತೆ ಪಕ್ಕದ ಮನೆಯ ಹುಡುಗಿಯನ್ನು ಮದುವೆಯಾಗಿದ್ದ. ಮನೆಯವರು ನೋಡಿದ ಹುಡುಗಿ, ನೋಡಲು ಸುಂದರವಾಗಿದ್ದರಿಂದ ಯುವಕ ಹಿಂದು ಮುಂದು ನೋಡದೆ ಮದುವೆ ಮಾಡಿಕೊಂಡಿದ್ದ. ಆದರೆ, ಆ ಮದುವೆಯಾದ ಬಳಿಕ ಆತನಿಗೆ ಗೊತ್ತಾಗಿದ್ದು, ತಾನು ವರಿಸಿರುವುದು ಅಪ್ರಾಪ್ತೆಯನ್ನು, ಹುಡುಗಿಯ ಮನೆಯವರು ತನಗೆ ವಯಸ್ಸು ಮರೆಮಾಚಿ ಮೋಸ ಮಾಡಿದ್ದಾರೆ ಎಂಬುವುದು.
ವಯಸ್ಸು ಮರೆಮಾಚಿ ಅಪ್ರಾಪ್ತೆಯ ಮದುವೆ :
2016 ರಲ್ಲಿ ಹುಡುಗಿಗೆ ಮದುವೆ ಮಾಡಬೇಕೆಂದು ಅಂದುಕೊಂಡ ಆಕೆಯ ಪೋಷಕರು, ಬೆಂಗಳೂರಿನ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಆದರೆ, ಕೆಲ ಕಾರಣಗಳಿಂದ ಹುಡುಗನ ಮನೆಯವರು ಮದುವೆಯನ್ನು ಮೊಟಕುಗೊಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಪಕ್ಕದ ಮನೆಯ ಯುವಕ ದುಬೈನಲ್ಲಿ ಇರುವ ವಿಚಾರವನ್ನ ತಿಳಿದುಕೊಂಡ ಹುಡುಗಿ ಪೋಷಕರು, ಹುಡುಗ ದುಬೈನಲ್ಲಿದ್ದಾನೆ. ಜೊತೆಗೆ ಒಳ್ಳೆಯ ಮನೆತನ ಎಂಬ ಕಾರಣಕ್ಕೆ ಹುಡುಗಿಯ ತಂದೆಯ ಸಹೋದರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರ ಮೂಲಕ ಮದುವೆಯ ಮಾತುಕತೆ ನಡೆಸಿದ್ದರು. ಬಳಿಕ ಇವರಿಬ್ಬರಿಗೂ ಮದುವೆ ನಿಶ್ಚಿಯವಾಗಿ, 2017 ಆಗಸ್ಟ್ 26ರಂದು ಮದುವೆ ಕೂಡಾ ಆಗಿತ್ತು. ಆದರೆ, ಮದುವೆ ಮಾತುಕತೆಯ ವೇಳೆ ಹುಡುಗಿಯ ವಯಸ್ಸನ್ನು ಮರೆಮಾಚಿ ನನ್ನ ತಮ್ಮನಿಗೆ ಮದುವೆ ಮಾಡಿಬಿಟ್ಟರು ಎಂದು ಯುವಕನ ಅಣ್ಣ ಈಗ ಆರೋಪಿಸಿದ್ದಾರೆ.
ಪಾಸ್ ಪೋರ್ಟ್ ಮಾಡಿಸುವಾಗ ತಗಲಾಕೊಂಡ್ರು:
ಮದುವೆ ಮಾಡಿಕೊಂಡ ಬಳಿಕ ಹುಡುಗ ಕೆಲಸ ನಿಮಿತ್ತ ದುಬೈಗೆ ಹೋಗಿದ್ದ. ಬಳಿಕ ತನ್ನ ಪತ್ನಿಯನ್ನ ಕೂಡ ದುಬೈಗೆ ಕರೆಸಿಕೊಳ್ಳುವ ನಿಮಿತ್ತ ಪಾಸ್ ಪೋರ್ಟ್ ಮಾಡಿಸಲು ಮನೆಯವರಿಗೆ ತಿಳಿಸಿದ್ದ. ಪಾಸ್ ಪೋರ್ಟ್ ಮಾಡಿಸಲು ಮೈಸೂರಿನ ಸೇವಾ ಕೇಂದ್ರಕ್ಕೆ ಹೋದಾಗ ಆಕೆಗೆ ಇನ್ನೂ 18 ವರ್ಷವಾಗದೇ ಇರುವ ಸತ್ಯಾಂಶ ಹೊರಬಿದ್ದಿದೆ. ಅಪ್ರಾಪ್ತೆಯನ್ನು ಮದುವೆಯಾದ ವಿಷಯ ಗೊತ್ತಾಗುತ್ತಿದ್ದಂತೆ ದುಬೈನಲ್ಲಿದ್ದ ಯುವಕ ತಕ್ಷಣ ಬರಬೇಕೆಂದು ಸೇವಾಕೇಂದ್ರದ ಅಧಿಕಾರಿಗಳು ಹೇಳುತ್ತಾರೆ. ಅಧಿಕಾರಿಗಳ ಸೂಚನೆ ಮೇರೆಗೆ ದುಬೈನಿಂದ ಮೈಸೂರಿನ ಸೇವಾ ಕೇಂದ್ರಕ್ಕೆ ಬಂದಾಗ ಯುವಕನನ್ನು ಲಾಕ್ ಮಾಡಿಕೊಂಡು ಆತನ ವಿರುದ್ದ ದೂರು ಕೂಡ ದಾಖಲು ಮಾಡಿದ್ದಾರೆ.
ಮದುವೆಗೆ ಮುನ್ನ, ನಂತರವೂ ಅನೈತಿಕ ಸಂಬಂಧ:
ಹುಡುಗಿ ನೋಡುವುದಕ್ಕೆ ಅಪ್ಸರೆಯಂತೆ ಇರಬಹುದು. ಆದ್ರೆ, ಗಂಡನೊಂದಿಗೆ ಸಂಸಾರ ಮಾಡಬೇಕಾದ ಈಕೆ, ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬುವುದು ಹುಡುಗನ ಮನೆಯವರ ಆರೋಪ. ಈ ಆರೋಪಕ್ಕೆ ಸಾಕ್ಷಿ ಎಂಬಂತೆ ಹುಡುಗಿ ಅನ್ಯ ಪುರುಷರೊಂದಿಗೆ ಸುತ್ತಾಡಿದ, ಪರಸ್ಪರ ಮುತ್ತು ಕೊಡುವ ಫೋಟೋಗಳು ಹುಡುಗನ ಮನೆಯವರು ಬಯಲು ಮಾಡಿದ್ದಾರೆ.
ಅತ್ಯಾಚಾರದ ಆರೋಪದಡಿ ಪೋಕ್ಸೊ ಕಾಯ್ದೆ ದಾಖಲು:
ಪರಸ್ಪರ ಎರಡೂ ಕಡೆಯವರ ಪೋಷಕರು ಒಪ್ಪಿ ಮದುವೆ ಮಾಡಿದ ಈ ಜೋಡಿಗಳು ತಿಂಗಳು ಕೂಡಾ ಜೊತೆಯಿರಲಿಲ್ಲವಂತೆ. ತನ್ನ ಪತ್ನಿಗೆ ಅನೈತಿಕ ಸಂಬಂಧವಿರುವ ವಿಚಾರ ಗೊತ್ತಾದಾಗ ಯುವಕ ಎಲ್ಲವನ್ನು ಬಿಟ್ಟುಬಿಡು ಎಂದು ಹೇಳಿದ್ದ. ಜೊತೆಗೆ ರಾಜಿ ಪಂಚಾಯ್ತಿ ಮೂಲಕ ತವರಿಗೂ ಕಳುಹಿಸಿಕೊಟ್ಟಿದರು. ಆದರೆ, ತನ್ನ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ಗಂಡ ಮತ್ತು ಆತನ ಮನೆಯವರ ವಿರುದ್ಧ ಹುಡುಗಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದಳು. ಈಗ ಬೇಲ್ ಪಡೆದು ಜೈಲಿನಿಂದ ಹೊರ ಬಂದಿರುವ ಹುಡುಗನ ಮನೆಯವರು ತಾವೂ ಮೋಸ ಹೋಗಿದ್ದೇವೆ ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡಿದ್ದಾರೆ. ಮದುವೆಯಾಗುವಾಗ ಹುಡುಗಿ ಅಪ್ರಾಪ್ತೆಯಾಗಿದ್ದಳು. ಈಗ ಆಕೆಗೆ 18 ವರ್ಷ ತುಂಬಿದೆ. ಆದರೆ, ಅಪ್ರಾಪ್ತೆಯನ್ನು ಮದುವೆಯಾಗಿದ್ದಕ್ಕಾಗಿ ಹುಡುಗ ಮತ್ತು ಮದುವೆ ಮಾಡಿಸಿದ ಆತನ ಮನೆಯವರ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಮೇಲೆ ತಂತ್ರ ಹೆಣೆದಿರುವ ಪ್ರಿಯಕರರು :
ತಮ್ಮ ವಿರುದ್ದ ಸುಳ್ಳು ಪೋಕ್ಸೊ ಕೇಸ್ ದಾಖಲಿಸಿ, ಜೀವನಾಂಶ ನೀಡಬೇಕೆಂದು ಕಾನೂನು ಹೋರಾಟಕ್ಕಿಳಿದ ಯುವತಿ ಒಂದು ಕಡೆಯಾದ್ರೆ, ಮತ್ತೊಂದೆಡೆ ಆಕೆಯ ಪ್ರಿಯಕರರು ಹುಡುಗಿ ಜೊತೆಗಿರುವ ಖಾಸಗಿ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಇಂತಿಷ್ಟು ಹಣ ಕೊಡಬೇಕೆಂದು ನಮಗೆ ಬ್ಲಾಕ್ ಮೇಲೆ ಮಾಡುತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಬಡಾವಣೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹುಡುಗನ ಮನೆಯವರು ತಿಳಿಸಿದ್ದಾರೆ.
ಅಪ್ರಾಪ್ತೆಯೆಂಬುದು ಇಬ್ಬರಿಗೂ ತಿಳಿದಿತ್ತು :
ಮದುವೆ ವೇಳೆ ಹುಡುಗಿ ಅಪ್ರಾಪ್ತೆಯೆಂಬುವುದು ಇಬ್ಬರ ಪೋಷಕರಿಗೂ ತಿಳಿದಿತ್ತು. ತವರು ಮನೆಯಿಂದ ಕೊಟ್ಟ ವರದಕ್ಷಿಣೆ ಮತ್ತು ಇತರೆ ವಸ್ತುಗಳನ್ನ ಗಂಡನ ಮನೆಯವರು ಹುಡುಗಿಗೆ ನೀಡುತ್ತಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮುನ್ನ ಇಬ್ಬರ ಕುಟುಂಬದ ಮುಖ್ಯಸ್ಥರನ್ನ ಕರೆಸಿ ಮಾತನಾಡಿದ್ರು, ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಲಾಗ್ತಿದೆ.
ಇನ್ನು ಪೊಲೀಸರು ಹುಡುಗಿಯ ಮನೆಯವರ ದೂರು ದಾಖಿಲಿಸಿಕೊಂಡಿದ್ದು, ನಮ್ಮ ದೂರು ದಾಖಲಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಹುಡುಗನ ಮನೆಯವರು ಆರೋಪಿಸಿದ್ದಾರೆ. ಆದರೆ, ನಾವು ನೀಡಿರುವ ದೂರು ನ್ಯಾಯಾಲಯದಲ್ಲಿರುವುದರಿಂದ, ಹುಡುಗನ ಮನೆಯವರು ಪ್ರತಿದೂರು ನೀಡಿದ್ದಾರೆ ಎಂದು ಹುಡುಗಿ ಮನೆಯವರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಯಾರು ತಪ್ಪಿತಸ್ಥರು ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.